Index   ವಚನ - 1683    Search  
 
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು, ತಾವು ಮಾತಂಗಿಯ ಗರ್ಭಸಂಭವ ಜೇಷ್ಠಪುತ್ರರೆಂಬುದನರಿಯದೆ. ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ: ಅದೆಂತೆಂದಡೆ- “ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ ನಜಾತಿಭೇದೋ ಲಿಂಗಾರ್ಚೇ, ರುದ್ರಗಣಾಃ ಸ್ಮೃತಾಃ” ಇಂತೆಂಬ ಪುರಾಣವಾಕ್ಯವನರಿದು ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ ಜೇಡ ಬೇಡನೆಂದು ನುಡಿಯುತಿಪ್ಪರು. ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ? ಮಾರ್ಕಂಡೇಯ ಮಾದಿಗನೆಂದು, ಸಾಂಖ್ಯ ಶ್ವಪಚನೆಂದು ಕಾಶ್ಯಪ ಕಮ್ಮಾರನೆಂದು, ರೋಮಜ ಕಂಚುಗಾರನೆಂದು, ಅಗಸ್ತ್ಯ ಕಬ್ಬಿಲನೆಂದು, ನಾರದ ಅಗಸನೆಂದು, ವ್ಯಾಸ ಬೇಡನೆಂದು, ವಶಿಷ್ಠಡೊಂಬನೆಂದು, ದುರ್ವಾಸ ಮಚ್ಚಿಗನೆಂದು, ಕೌಂಡಿಲ್ಯ ನಾವಿಂದನೆಂದು, ಅದೆಂತೆಂದಡೆ ವಾಸಿಷ್ಠದಲ್ಲಿ- “ವಾಲ್ಮಿಕೀ ಚ ವಶಿಷ್ಠಶ್ಚ ಗಾಗ್ರ್ಯಮಾಂಡವ್ಯಗೌತಮಾಃ ಪೂರ್ವಾಶ್ರ[ಮೇ] ಕನಿಷ್ಠಾಸ್ಯುರ್ದೀಕ್ಷಯಾ ಸ್ವರ್ಗಗಾಮಿನಃ” ಎಂದುದಾಗಿ, ಇದನರಿದು ಮರೆದಿರಿ ನಿಮ್ಮ ಕುಲವನು. ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ. ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ. ಎಮ್ಮ ಸದ್ಭಕ್ತರೇ ಕುಲಜರು. ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ. ಅದೆಂತೆಂದಡೆ ಅಥರ್ವವೇದದಲ್ಲಿ- “ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್ ಋಷೀಣಾಂ ವರ್ಣಶ್ರೇಷ್ಠೋs ಘೋರ ಋಷಿಃ ಸಂಕರ್ಷಣಾತ್ ಇತ್ಯಾದಿ ವೇದ ವಚನ ಶ್ರುತಿಮಾರ್ಗೇಷು” ಎಂದುದಾಗಿ ಮತ್ತಂ ವಾಯವೀಯಸಂಹಿತಾಯಾವಮ್- “ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋsಪಿ ವಾ ಭಸ್ಮ ರುದ್ರಾಕ್ಷಕಕಂಠೋ ವಾ ದೇಹಾಂತೇ ಸ ಶಿವಂ ವ್ರಜೇತ್“ ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ- “ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತಮ್ ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್” ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ ಮರೆಸಿಹೋದವು ಕೇಳಿರಣ್ಣಾ. ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ ಪಾದತೀರ್ಥ ಪ್ರಸಾದವಂ ಕೊಂಡು, ಉತ್ತಮ ವರ್ಣಶ್ರೇಷ್ಠರಾದರು ಕಾಣಿರೇ. ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು. ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ.