Index   ವಚನ - 1702    Search  
 
ಸರವರದೊಳಗೊಂದು ಹಿರಿದು ಕಮಳವು ಹುಟ್ಟಿ, ಪರಿಮಳವಡಗಿತ್ತನಾರೂ ಅರಿಯರಲ್ಲಾ! ಅರಳಿಲೀಯದೆ ಕೊಯ್ದು ಕರಡಿಗೆಯೊಳಗಿರಿಸಿ ಸುರಕ್ಷಿತವ ಮಾಡಲಾರೂ ಅರಿಯರಲ್ಲಾ! ಎಡದ ಕೈಯಲಿ ಲಿಂಗ, ಬಲದ ಕೈಯಲಿ ಪುಷ್ಪ ಎರಡನರಿದು ಪೂಜೆಯ ಮಾಡಲರಿಯರಲ್ಲಾ! ಇವರಲೋಗರವ ಮಾಡಿ ಸರುವ ತೃಪ್ತಿಯ ಕೊಟ್ಟು ಭರಿತರಾಗಿಪ್ಪರಿನ್ನಾರು ಹೇಳಾ! ಪರದೇಶಮಂಡಲವನಿರವನೊಂದನೆ ಮಾಡಿ, ಪರಿಯಾಯ ಪರಿಯಾಯವನೊರೆದು ನೋಡುತ್ತ ಕರುವಿಟ್ಟ ರೂಹಿಂಗೆ ಕಣ್ಣೆರಡು ಹಳಚದಂತೆ, ಧರೆಯ ಏರಿಯ ಮೇಲೆ ಮೆಟ್ಟಿನಿಂದು ನೋಡುತ್ತ ಹರಿವ ವೃಷಭನ ಹಿಡಿದು ನೆರೆವ ಸ್ವಾಮಿಯ ಕಂಡು ಜನನ ಮರಣವಿಲ್ಲದಂತಾದೆನಲ್ಲಾ! ಕರುಣಿ ಕೂಡಲಚೆನ್ನಸಂಗಯ್ಯಾ ಬಸವಣ್ಣನ ಕರುಣ, ಪ್ರಭುವಿಗಲ್ಲದೆ ಇನ್ನಾರಿಗೂ ಅಳವಡದು.