ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ-
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ,
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು,
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ
ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ? ಲಿಂಗ ಶ್ರೇಷ್ಠವೊ?
ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು,
ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು,
ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು-
ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ದೈವವೆಂದು
ಮಾಡುವನಾಗಿ ಆತ ಲಿಂಗಭಕ್ತನು.
ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ
ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ-ತಿಥಿ-ವಾರಂಗಳಲ್ಲಿ ಕೂರ್ತುಮಾಡುವಾತ ಭಕ್ತನಲ್ಲ.
ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ
ನಾಯಕನರಕದಲ್ಲಿಕ್ಕುವನು