Index   ವಚನ - 1723    Search  
 
ಸೃಷ್ಟಿಯ ಮೇಲಣ ಕಣಿಯ ತಂದು ಇಷ್ಟಲಿಂಗವೆಂದು ಮಾಡಿ ಅಷ್ಟತನುವಿನ ಕೈಯಲ್ಲಿ ಕೊಟ್ಟು ಆ ಅಷ್ಟತನುವಿನ ಕೈ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ ಮೆಟ್ಟಿ ಮೆಟ್ಟಿ ಹೂಳಿಸಿಕೊಂಬ ಗುರುದ್ರೋಹಿಗಳ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು. ಇದಕ್ಕೆ ದೃಷ್ಟಾಂತ, ಗಾರುಡ ಪುರಾಣೇ: “ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ| ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್”|| ಇಂತೆಂದುದಾಗಿ, ಇಷ್ಟಲಿಂಗ ಬಿದ್ದಡೆ ಆಚಾರಲಿಂಗ ಬಿದ್ದಿತೆ? ಆಚಾರಲಿಂಗ ಬಿದ್ದಡೆ ಗುರುಲಿಂಗ ಬಿದ್ದಿತೆ? ಗುರುಲಿಂಗ ಬಿದ್ದಡೆ ಶಿವಲಿಂಗ ಬಿದ್ದಿತೆ? ಶಿವಲಿಂಗ ಬಿದ್ದಡೆ ಜಂಗಮಲಿಂಗ ಬಿದ್ದಿತೆ? ಜಂಗಮಲಿಂಗ ಬಿದ್ದಡೆ ಪ್ರಸಾದಲಿಂಗ ಬಿದ್ದಿತೆ? ಪ್ರಸಾದಲಿಂಗ ಬಿದ್ದಡೆ ಮಹಾಲಿಂಗ ಬಿದ್ದಿತೆ? ಅಕಟಕಟ ಷಡ್ವಿಧಲಿಂಗದ ಭೇದವನರಿಯದೆ ಕೆಟ್ಟ ಕೇಡ ನೋಡಾ ! ಅಭ್ಯಾಸವ ಮಾಡುವಲ್ಲಿ ಕೋಲು ಬಿದ್ದಡೆ ತನ್ನ ತಾನೆ ಇರಿದುಕೊಂಡು ಸಾಯಬಹುದೆ? ಆ ಕೋಲಿನಲ್ಲಿ ಅಭ್ಯಾಸವನೆ ಮಾಡಿ ಸುರಗಿಯ ಮೊನೆಯನೆ ಗೆಲಿಯಬೇಕಲ್ಲದೆ? ಇದು ಕಾರಣ: ಜಲ ಅಗ್ನಿ ನೇಣು ವಿಷ ಅಸಿಪತ್ರ ಸಮಾಧಿ ಇಂತವರಿಂದ ಪ್ರಾಣಹಿಂಸೆಯ ಮಾಡುವರನು ಅಘೋರನರಕದಲ್ಲಿ ಅದ್ದಿ ಅದ್ದಿ ಇಕ್ಕುವ ನಮ್ಮ ಕೂಡಲಸಂಗಮದೇವ.