Index   ವಚನ - 1726    Search  
 
ಸ್ಥೂಲ ಪಂಚಭೂತಕಾಯದ ಪಂಚತತ್ತ್ವಂಗಳ ವಿವರಿಸಿ ಬೋಧಿಸಿ ಕಳೆದು, ಸೂಕ್ಷ್ಮ ಪಂಚಭೂತಕಾಯದ ತನ್ಮಾತ್ರಗುಣಂಗಳ ವಿವರದ ಭೇದವ ಭೇದಿಸಿ ತೋರಿ ಕಳೆದು, ಕಾರಣಪಂಚಭೂತ ಕಾಯದ ಕರಣವೃತ್ತಿಗಳ ಮಹಾವಿಚಾರದಿಂದ ತಿಳುಹಿ ವಿವರಿಸಿ ಕಳೆದು, ಸ್ಥೂಲಪಂಚಾಚಾರದಿಂದ ತಿಳುಹಿ ವಿವರಿಸಿ ಕಳೆದು, ಸ್ಥೂಲಪಂಚಭೂತಕಾಯದಲ್ಲಿ ಇಷ್ಟಲಿಂಗವ ಪ್ರತಿಷ್ಠೆಯ ಮಾಡಿ ಸದಾಚಾರಸ್ಥಳಕುಳವ ನೆಲೆಗೊಳಿಸಿ, ಸೂಕ್ಷ್ಮಪಂಚಭೂತಕಾಯದಲ್ಲಿ ಪ್ರಾಣಲಿಂಗ ಪ್ರತಿಷ್ಠೆಯ ಮಾಡಿ, ಮಹಾವಿಚಾರದ ಅನುಭಾವವ ನೆಲೆಗೊಳಿಸಿ, ಕಾರಣಪಂಚಭೂತಕಾಯದಲ್ಲಿ ತೃಪ್ತಿಲಿಂಗವ ಪ್ರತಿಷ್ಠೆಯ ಮಾಡಿ ಪರಮಾನಂದಸುಜ್ಞಾನವ ನೆಲೆಗೊಳಿಸಿ, ಇಂತೀ ಸ್ಥೂಲಸೂಕ್ಷ್ಮ ಕಾರಣವೆಂಬ ತನುತ್ರಯಂಗಳನೇಕೀಭವಿಸಿ ತೋರಿ, ಪೂರ್ವಜನ್ಮದ ನಿವೃತ್ತಿಯ ಮಾಡಿ, ಲಿಂಗಜನ್ಮದ ಪ್ರತಿಷ್ಠೆಯ ಮಾಡಿ ಎನ್ನ ಕೃತಾರ್ಥನ ಮಾಡಿದ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ