Index   ವಚನ - 1762    Search  
 
ಹೋ ಹೋ ಗುರುವೆ ನಿಮ್ಮ ಚಮ್ಮಾವುಗೆಯ ಬಂಟ ನಾನಾಗಿರಲು ಅಂಜುವರೆ? ಅಳುಕುವರೆ? ಸಂಗಮನಾಥ ಬಂದು, ನಿಮ್ಮ ಮನವ ನೋಡಲೆಂದು ತಮ್ಮ ಮನವನಡ್ಡಲಿಕ್ಕಿದನೊಂದು ಲೀಲೆಯಿಂದ. ಅದು ನಿಮಗೆ ಸಹಜವಾಗಬಲ್ಲುದೆ? ಮಂಜಿನ ಮೋಹರ, ರವಿಯ ಕಿರಣವ ಕೆಡಿಸಲಾಪುದೆ? ನಿಮ್ಮ ನೆನೆವರಿಗೆ ಸಂಸಾರವಿಲ್ಲೆಂದು ಶ್ರುತಿಗಳು ಹೊಗಳುತ್ತಿರಲು ನಿಮ್ಮ ಅರುಹಿಂಗೆ ಕೇಡುಂಟೆ? ಕೂಡಲಚೆನ್ನಸಂಗನ ಶರಣರ ಕರೆವಡೆ, ಎನ್ನ ಮನವೆಂಬ ಚಮ್ಮಾವುಗೆಯ ಮೆಟ್ಟಿ ನಡೆಯಾ ಸಂಗನಬಸವಣ್ಣ.