Index   ವಚನ - 1761    Search  
 
ಹೋ ಹೋ ಗುರುವೆ, ನಿಮ್ಮ ಕರಕಮಲದಲ್ಲಿ ಉದಯಿಸಿ ಅಂಗದ ಮೇಲೆ ಲಿಂಗವ ಧರಿಸಿ, ಲಿಂಗದಲ್ಲಿ ಆಗಾಗಿ, ಪ್ರಾಣಲಿಂಗ ಲಿಂಗಪ್ರಾಣ ಎಂಬುದ ನಾನು ಕಂಡೆನು. ನಿಮಗಾನು ತೋರಲು ಸಮರ್ಥನೆ? ಆಚಾರ ಅಂಗದ ಮೇಲೆ ನೆಲೆಗೊಂಡು, ಇಷ್ಟಲಿಂಗದಲ್ಲಿ ದೃಷ್ಟಿನಟ್ಟು ಭಾವಸಂಪನ್ನವಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ? ಅನುಭಾವ ಅಂತರಂಗದಲ್ಲಿ ಎಡೆಗೊಂಡು, ಪ್ರಾಣಲಿಂಗದಲ್ಲಿ ನಿಕ್ಷೇಪವಾಗಿ, ನಿಜಲಿಂಗೈಕ್ಯನಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ? ಜ್ಞಾನಸಮಾಧಿಯೊಳಗೆ ಬಯಕೆಯಡಗಿ ಪರಿಣಾಮಲಿಂಗದಲ್ಲಿ ಮನಸ್ಸು ಲಯವಾಗಿ ನಿಜಲಿಂಗತೃಪ್ತರಾಗಿಪ್ಪಿರಿ ನೀವು; ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ! ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂಬಲ್ಲಿ ಜಂಗಮಲಿಂಗ ಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ ಲಿಂಗಕ್ಕೆ ಬಂದ ಪದಾರ್ಥವನಲ್ಲದೆ ಕೊಳ್ಳೆನೆಂದು ಮನ ಮೀಸಲು, ತನುಮೀಸಲು ಮಾಡಿ, ಸರ್ವಾಂಗಸುಖವೆಲ್ಲವನು ಪ್ರಾಣಲಿಂಗದಲ್ಲಿ ಅರ್ಪಿಸಿ, ನಿರಾಭಾರಿಯಾಗಿ, ಪ್ರಸಾದಲಿಂಗಪ್ರಾಣಿಯಾಗಿಪ್ಪಿರಿ ನೀವು ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ! ಅನಾದಿ ಶಿವಂಗೆ ಆಧಾರವಿಲ್ಲೆಂದು, ಅಖಂಡಿತನ ನಿಮ್ಮ ರೋಮದ ಕೊನೆಯಲ್ಲಿ ಧರಿಸಿ ಮಹಾಲಿಂಗಪ್ರಾಣಿಯಾಗಿಪ್ಪಿರಿ ನೀವು, ನಿಮ್ಮ ಘನವ ನಾನೆತ್ತ ಬಲ್ಲೆನಯ್ಯಾ! ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ, ನಿಮ್ಮ ಪ್ರಾಣಲಿಂಗಸಂಬಂಧದ ಸೆರಗು ಸೋಂಕಿನ ಒಕ್ಕುಮಿಕ್ಕ ಪ್ರಸಾದಿ ನಾನು ಕಾಣಾ ಸಂಗನ ಬಸವಣ್ಣ.