Index   ವಚನ - 4    Search  
 
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.