Index   ವಚನ - 44    Search  
 
ಭಕ್ತಿ ವಿಶ್ವಾಸ ವಿರಕ್ತಿ ಜಗದ ವೈಭವದ ದೇಹಿಗಳು ಕೇಳಿರೊ. ಅಹಿ ಹಲ್ಲಿ ವಿಹಂಗ ಮಾರ್ಜಾಲ ಜಂಬುಕ ಕರೋತಿ ಜಾತಿ ಉತ್ತರ ಪಿಂಗಲಿ ಲೆಕ್ಕ ಸಹದೇವ ಬೌದ್ಧ ಮತಂಗಳೆಂಬ ನಿಮಿತ್ತವ ನೋಡಿ, ಕಾರ್ಯಸಿದ್ಧಿಯೆಂಬ ಸಾಕಾರಿಗಳಿಗೆ ಆಚಾರ ಅರಿವು ನೀತಿಯೇಕೆ? ಕರಸ್ಥಲದ ಜ್ಯೋತಿರ್ಮಯಲಿಂಗವಿದ್ದಂತೆ, ಅಪರವನರಿವ ಪರಂಜ್ಯೋತಿಯ ಬೆಳಗು ಇದ್ದಂತೆ, ಇಂತೀ ಅನ್ಯವ ನೀತಿಯೆಂದು ಕೇಳುವಾತ, ಮಾಡುವ ಪೂಜೆ ಹಾವಿನ ಘಾತದಂತೆ. ಆತ ನುಡಿವ ಮಾತಿನ ಬಳಕೆ, ಸುರೆಯ ಮಡಕೆಯಲ್ಲಿ ಹೂಸಿಪ್ಪ ಶ್ವೇತದಂತೆ. ಆತನಿರವು ಮೃತ್ತಿ[ಕೆ]ಯ ಬೊಂಬೆಯ ಜಲದ ಕುಪ್ಪಸದಂತೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ ಇದಾರಿಗೂ ಚೋದ್ಯ.