Index   ವಚನ - 261    Search  
 
ಇಹಪರವ ಸಾಧಿಸಿದೆನೆಂಬ ಭ್ರಮೆಯ ಭ್ರಾಂತನೆ ಕೇಳು: ಇಹ ಅರ್ಥ, ಪರ ವ್ಯರ್ಥ, ಎರಡರಿಂದಲಿ ಅನರ್ಥ ಇಹ ಸಿಕ್ಕುವುದೆ? ಇದ್ದಲ್ಲಿ ಇಲ್ಲ. ಪರ ಸಿಕ್ಕುವುದೆ?ಇಲ್ಲದಲ್ಲಿ ಇಲ್ಲ. ಇಹಪರಕೆ ಗುರುತಾವುದು ಅರಸುವರೆ? ಇಹಪರವ, ಇದ್ದಲ್ಲಿ ಕಾಣದೆ ಕಣ್ಣುಗೆಟ್ಟರು ನವಕೋಟಿ ಬ್ರಹ್ಮರು. ಇಹಪರವ, ಇದ್ದಲ್ಲಿ ಕಾಣದೆ ಕಣ್ಣುಗೆಟ್ಟರು ನವಕೋಟಿ ವಿಷ್ಣುವರು. ಇಹಪರವ, ಇದ್ದಲ್ಲಿ ಕಾಣದೆ ಕಣ್ಣುಗೆಟ್ಟರೆ ನವಕೋಟಿ ರುದ್ರರು, ಇಂತಪ್ಪ ಅವರಿಗೆ ಅಸಾದ್ಯವು. ಇಹವು ಆದಿಯ ಶರಣಂಗೆ, ಪರವು ಅನಾದಿಯ ಕರುಣಗೆ, ಸಾಧಿಸಿಹೆನೆಂಬರಿಗೆ ಅಸಾಧ್ಯ, ಬೇದಿಸಿಹೆನೆಂಬರಿಗೆ ಅಭೇಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.