Index   ವಚನ - 3    Search  
 
ನಾದವೆ ಗುರು, ಬಿಂದುವೆ ಲಿಂಗ, ಕಳೆಯ ಜಂಗಮ. ಮತ್ತಂ, ನಾದವ ಅಕಾರ ಬಿಂದುವೆ ಉಕಾರ, ಕಳೆಯ ಮಕಾರ. ಮತ್ತಂ, ನಾದವೆ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು ಸ್ಥಲ. ಬಿಂದುವೆ ಕ್ರಿಯಾಲಿಂಗ, ಭಾವಲಿಂಗ, ಜ್ಞಾನಲಿಂಗ ಸ್ಥಲ. ಕಳೆಯ ಸ್ವಯ ಚರ ಪರ ಸ್ಥಲವಯ್ಯ. ಮತ್ತಂ, ನಾದವೆ ಸಂಗನಬಸವೇಶ್ವರ, ಬಿಂದುವೆ ಚನ್ನಬಸವೇಶ್ವರ, ಕಳೆಯೆ ಪ್ರಭುದೇವರು, ಮತ್ತಂ, ನಾದವೆ ತತ್ವದ ಸ್ವರೂಪವಾದ ಪ್ರಾಣಾಲಿಂಗ, ಬಿಂದುವೆ ತ್ವಂಪದ ಸ್ವರೂಪವಾದ ಇಷ್ಟಲಿಂಗ, ಕಳೆಯ ಅಸಿಪದ ಸ್ವರೂಪವಾದ ಭಾವಲಿಂಗವು. ಮತ್ತಂ, ನಾದವೆ ಅಸ್ತಿ, ಬಿಂದುವೆ ಪ್ರೀತಿ, ಕಳೆಯೆ ಭಾವಲಿಂಗ. ಮತ್ತಂ, ಬಿಂದುವೆ ಆಚಾರಲಿಂಗ ಗುರುಲಿಂಗ ಸ್ವರೂಪವಾಯಿತ್ತು. ನಾದವೆ ಶಿವಲಿಂಗ, ಜಂಗಮಲಿಂಗವೆಂದುಭಯವಾಯಿತ್ತು. ಕಳೆಯ ಪ್ರಸಾದಲಿಂಗ ಮಹಾಲಿಂಗವೆಂದೆರಡಾಯಿತ್ತು. ಮತ್ತಂ, ಬಿಂದುಸ್ವರೂಪವಾದ ಅಚಾರಲಿಂಗವೆ ಸದ್ಯೋಜಾತ ಬ್ರಹ್ಮ. ರಸಸ್ವರೂಪವಾದ ಗುರುಲಿಂಗವೆ ವಾಮದೇವ ಬ್ರಹ್ಮ. ನಾದವೆ ಕಳಾಸ್ವರೂಪವಾದ ಶಿವಲಿಂಗ ಅಘೋರ ಬ್ರಹ್ಮ. ಚಲನಾ ಸ್ವರೂಪನಾದ ಜಂಗಮಲಿಂಗವೆ ತತ್ಪುರುಷ ಬ್ರಹ್ಮ. ಚಿತ್ಕಳೆಯ ಸ್ವರೂಪವಾದ ಪ್ರಸಾದಲಿಂಗವೆ ಈಶಾನ್ಯಬ್ರಹ್ಮ. ಪಂಚಲಿಂಗಾಧಾರವಾದ ಮಹಾಲಿಂಗವೆ ಗೋಪ್ಯ ಬ್ರಹ್ಮ. ಇಂತೀ ಷಟ್ಸ್ಥಲ ಬ್ರಹ್ಮಸ್ವರೂಪವಾದ ಶ್ರೀಗುರುದೇವಂಗೆ ನಮಸ್ಕಾರವಯ್ಯ, ಶಾಂತವೀರೇಶ್ವರಾ