Index   ವಚನ - 59    Search  
 
ಇನ್ನು ಚತುಃಶೈವಗಳಾವಾವವೆಂದೊಡೆ: ಸಮಾನ್ಯಶೈವ ಮಿಶ್ರಶೈವ ಶುದ್ದಶೈವ ವೀರಶೈವವೆಂದು ಕ್ರಮದಿಂದದಪ್ಪುವು. ಅ ನಾಲ್ಕು ವಿಧವಾದ ಶೈವಗಳೊಳಗೆ ಮೊದಲು ಸಾಮಾನ್ಯಶೈವ ಲಕ್ಷಣವನು ಹೇಳಿಹೆನು: ಆವನಾನೊಬ್ಬ ಸಾಮಾನ್ಯ ಶೈವನು ವಿಭೂತಿಯ ಪಟ್ಟ ಮಾತ್ರದಿಂದವೆ ಶುದ್ಧವಾಗುತ್ತಿದ್ದನಾಗಿ ಸ್ವಯಂಭು ಲಿಂಗವನಾದರೆಯು ದೇವ ದಾನವ ಮಾನವಾದಿಗಳಿಂದ ಪ್ರತಿಷ್ಠಿತವಾದ ಲಿಂಗವನಾದರೆಯು ಅವ ವೇಳೆಯಲ್ಲಿ ಕಂಡನೋ ಅದೇ ವೇಳೆಯಲ್ಲಿ ಅಲ್ಲಿರ್ದರ್ಚನೆಯ ಮಾಡೂದು, ಪ್ರದಕ್ಷಿಣಿ ದರ್ಶನ ನಮಸ್ಕಾರವನಾದಡೆಯೂ ಮಾಡೂದು, ಶಿವಕೀರ್ತಿ ಶಿವ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನು ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯತಿ ಇಲ್ಲದಿದ್ದರೂ ಲಬ್ಧವಾದ ಕ್ರಿಯಗಳನಾಚರಿಸಿವುದು ಸಾಮನ್ಯ ಶೈವ ಲಕ್ಷಣವೆಂದು ನುಡಿಯುವರಯ್ಯ. ಇನ್ನು ಮಿಶ್ರ ಶೈವ ಲಕ್ಷಣವೆಂತೆಂದೊಡೆ: ಗ್ರಂಥ: ಶೈವಂ ಚ ವೈಷ್ಣವಂ ಶಾಕ್ತ ಕೌಮಾರಂ ಗಣಪತ್ಯಕಂ ಸೌರಂ ಚಾಖಿಲ ದೈವತಂ| ಪೂಜಿನಂ ಚ ಸಮಾಚರೇತ್||’ ಎಂದು ಸಿಂಹಾಸನದಲ್ಲಿ ಸ್ಥಾಪಿತವಾದ ಲಿಂಗಪೂಜೆಯನು, ದೇವಿಯ ಪೂಜೆಯನು, ವಿಘ್ವೇಶ್ವರ ಪೂಜೆಯನು, ಷಣ್ಮುಖ ಪೂಜೆಯನು, ಸೂರ್ಯ ಪೂಜೆಯನು, ಆವನಾನೊಬ್ಬ ವೈದಿಕ ಶೈವನು ಈ ಪಂಚ ಪೂಜೆ ಸಹವಾಗಿ ಇಂದ್ರಾದ್ಯಖಿಲ ಪೂಜೆಯನು ಲೇಸಾಗಿ ಮಾಡುವುದು. ಈ ಪೂರ್ವೋಕ್ತವಾದ ಪಂಚಾವರಣ ಮೊದಲಾದ ಸಮಸ್ತ ದೇವತೆಗಳಲ್ಲಿಯೂ ಆಯಾ ದೇವತಾ ಮಂತ್ರಗಳಲ್ಲಿಯೂ ಬೆರೆಯರ್ದಿದರಿಂದ ಸಮಾನವಾದ ಭಕ್ತಿಯೊಡನೆ ಕೂಡಿ ಸಮಸ್ತ ದೇವತೆಗಳನ್ನು ಶಿವಪರಿಪೂರ್ಣ ಭಾವದಿಂ ಶಿವಲಿಂಗದೊಡನೆ ಕೂಡಿ ಭಾವಿಸುವುದು. ಈ ಪ್ರಕಾರದಲ್ಲಿ ಮಿಶ್ರ ಶೈವವನು ಹೇಳುವರಯ್ಯ. ಶಿವನನು ಉದ್ಧೇಶಿಸಿರುವುದರಿಂದ ಶುದ್ಧ ತತ್ವವಪ್ಪುದು, ಶಿವನ ದೆಸೆಯಿಂದ ಪುಟ್ಟಿದ ಕಾರಣ ಶೈವ ಶಬ್ದವಾಯಿತ್ತು, ಶುಧ್ಧ ಶೈವವೆಂದು ನೆನೆಯುತ್ತಾರೆ. ಆ ಶುದ್ಧ ಶೈವದ ದೆಸೆಯಿಂದ ಹುಟ್ಟಿದವನು ಶಿವ ಬ್ರಾಹ್ಮಣನೆನಿಸಿಕೊಂಬನು ಇಂತಿವು ಚತುಃಶೈವವಯ್ಯ ಶಾಂತವೀರೇಶ್ವರಾ