ಹುಟ್ಟಿದವನಿಗೆ ಮರಣ ನಿಯಮ
ಸತ್ತವನಿಗೆ ಹಾಂಗೆಯ ಹುಟ್ಟುವುದು ನಿಯಮ.
ಜೀವನು ಜನನ ಮರಣಂಗಳಿಂದ
ಕುಲಾಲನ ತಿಗುರಿಯೋಪಾದಿಯಲ್ಲಿ ತಿರುಗುತ್ತಿರುವುನು.
ಬಳಿಕ ನಾರಾಯಣಂ ಬಂದ ಜನನ ಮರಣಂಗಳಂ ಪೇಳ್ವನದೆಂತೆನೆ:
ಮತ್ಸ್ಯ ಕೂರ್ಮ ವರಾಹವತಾರಂಗಳಿಂದೆ
ನೃಸಿಂಹ ವಾಮನಾವತಾರ ಮೊದಲಾಗುಳ್ಳ
ಪರಶುರಾಮ ಶ್ರೀರಾಮ ಬಲರಾಮ ಕೃಷ್ಣ ಕಲ್ಕ್ಯಾವತಾರಂಗಳಿಂದ
ಹುಟ್ಟುತ್ತಿರ್ದ ವಿಷ್ಣುವಿಗಾದರೂ ಜನನ ಮರಣ ತಪ್ಪಲಿಲ್ಲ,
ಉಳಿದ ದೇವದಾನವ ಮಾನವಾದಿಗಳಿಗೆ
ಜನನ ಮರಣ ಹಿಂಗದೆಂಬುದರ್ಥವಯ್ಯ
ಶಾಂತವೀರೇಶ್ವರಾ