Index   ವಚನ - 93    Search  
 
ಸ್ರಕ್ಚಂದನ ವನಿತಾದಿ ವಿಷಯಂಗಳಲ್ಲಿ ತನಗನುರಾಗ ಉಳ್ಳಂಥ ವಿವೇಕ ಉಳ್ಳಂಥ ವಿರಕ್ತಂಗೆ ಸಂಸಾರ ದುಃಖವ ಕಿಡಿಸುವ ಕಾರಣ ಬುದ್ಧಿಯು ಹುಟ್ಟುತ್ತಿಹುದು. ಮಲ ಮಾಯಾ ಕರ್ಮವೆಂಬ ಪಾಶತ್ರಯದಿಂ ಬದ್ಧನಾದಾತ್ಮನು ಜನ್ಮಾಂತರಂಗಳನೆಯ್ದುವದರಿಂದ ಸಂಸಾರಿ ಎಂದು, ವಿಷಯರೂಪಂಗಳಾದ ಭೋಗಂಗಳನು ಅನುಭವಿಸುವುದರಿಂದ ಭೋಕ್ತನೆಂದು ಪೂರ್ಯಷ್ಟಕ ದೇಹವಾವುದೆಂದೊಡೆ ಮುಂದೆ ಪೇಳ್ವ ತತ್ತ್ವಂಗಳು ಅಷ್ಟವರ್ಗವಾಗಿರುತ್ತಿಹವು; ಅವು ಎಂತೆಂದೊಡೆ; ಪಂಚ ಕಂಚುಕಗಳವೆಂತೆಂದೊಡೆ, ಕೆಲೆ, ಅವಿದ್ಯೆ, ರಾಗ, ಕಾಲ ನಿಯತಿಗಳು ಪ್ರಕೃತಿ ಗುಣತ್ರಯ ಅಂತಃಕರಣಚತುಷ್ಟಯಂಗಳು, ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ತನ್ಮಾತ್ರೆಗಳು ಪಂಚಮಹಾ ಭೂತಂಗಳು ಎಂಬ ಅಷ್ಟವರ್ಗಂಗಳಿಂ ಯುಕ್ತವಾದ ಶರೀರವು ಪೂರ್ಯಷ್ಟಕ ದೇಹವೆನಿಸಿಕೊಂಬುದು. ಆ ಪೂರ್ಯಷ್ಟವೆಂಬುದೆ ಕ್ಷೇತ್ರ ಉಳ್ಳುದರಿಂದೆ ‘ಕ್ಷೇತ್ರ’ ಎಂದು, ಕ್ಷೇತ್ರ ಬಲದಿಂದೆ ಅರಿವಾತನಪ್ಪುದರಿಂ ‘ಕ್ಷೇತ್ರಜ್ಞ’ನೆಂದು, ಪಂಚಭೂತಮಯವಪ್ಪ ಸ್ಥೂಲ ಶರೀರ ಉಳ್ಳುದರಿಂದ ‘ಶರೀರ’ ಎಂದು, ಕಲೆ ಕಾಲ ನಿಯತಿ ಅವಿದ್ಯೆ ರಾಗವೆಂಬ ಪಂಚ ಕಂಚುಕಗಳಿಂ ಕಟ್ಟಿರುವುದರಿಂದ ‘ಬದ್ದಾ’ತನೆಂದು, ಈ ಸಕಲ ರೂಪವಾದುದರಿಂದ ‘ಸಂಕಲ್ಪ’ವೆಂದು ಶಿವಾಗಮಜ್ಞರು ಹೇಳುವರಯ್ಯ ಶಾಂತವೀರೇಶ್ವರಾ