Index   ವಚನ - 108    Search  
 
ಬಳಕಂ ಭೇದವನು ಪೇಳುತ್ತಿರ್ದಪನು. ಎಲೆ ಅಗಸ್ತ್ಯ ಮುನಿಯೆ, ಆ ದಿಕ್ಷೆಯು ಶಿವಾಗಮ ಪ್ರವೀಣರಾದ ಆಚಾರ್ಯರಿಂದ ವೇಧಾ ದೀಕ್ಷೆಯೆಂದು ಮಂತ್ರ ದೀಕ್ಷೆಯೆಂದು ಕ್ರಿಯಾ ದೀಕ್ಷೆಯೆಂದು ಮೂರು ಪ್ರಕಾರವಾಗಿ ಹೇಳಲಾಗಿತ್ತು. ಬಳಿಕ ದೀಕ್ಷಾತ್ರಯಂಗಳ ಪೇಳುವೆನು ಅದೆಂತೆಂದೊಡೆ: ಶ್ರೀಗುರುವಿನ ದರ್ಶನ ಮಾತ್ರದಿಂದವೆ ಹಸ್ತಮಸ್ತಕ ಸಂಯೋಗದಿಂದ ಆವುದಾನೊಂದು ಜ್ಞಾನ ಕ್ರಿಯಾತ್ಮಕವಾದ ಶಿವಸ್ವರೂಪಿಯೊಡನೆ ಆವೇಶ ಉಂಟು-ಅದು ವೇಧಾದೀಕ್ಷೆ ಎಂದು ಸಮ್ಮತವು. ಶ್ರೀಗುರುವಿನ ದೃಷ್ಠಿ ಗರ್ಭದಲ್ಲರ್ದು ಕರಕಮಲದಲ್ಲಿ ಹುಟ್ಟಿದ ಆತ್ಮರಿಗೆ ಚಿನ್ಮಯಿ ಸ್ವರೂಪವನುಪದೇಶಿಸುವುದೆ ‘ವೇಧಾ ದೀಕ್ಷೆ’ ಸೋಹಂ ಎಂದು ಪ್ರಣವಮಂತ್ರ ರೂಪವಾದ ಪ್ರಾಣಿಗೆ ಪಂಚಾಕ್ಷರ ಮಂತ್ರವನು ಸಾಕ್ಷಾತ್ಕರಿಸಿ ಉಪದೇಶಿಸುವುದಂಟು, ಆದು ಮನನ ತ್ರಾಣ ಧರ್ಮವುಳ್ಳ ‘ಮಂತ್ರ’ ಸಂಬಂಧಿನಿಯಾದ ‘ದೀಕ್ಷೆ’ ಎಂದು ಹೇಳುವುರು. ಕಳಶ ಬಂಧದೊಡನೆ ಕೂಡಿರ್ದ ಕ್ರಿಯಾ ದೇಹಕ್ಕೆ ಮಾಡುವ ಲಿಂಗ ಧಾರಣಾದಿ ಕ್ರಿಯೆ ಉತ್ತರವಾಗುಳ್ಳ ಕ್ರಿಯಾದೀಕ್ಷೆ ಎಂದು ಹೇಳುವರು. ಅವಸ್ಥಾತ್ರಯ ದೇಹತ್ರಯ ಯುಕ್ತವಾದ ಆತ್ಮತ್ರಯಕ್ಕೆ ಚಕ್ರತ್ರಯ ರೂಪತ್ರಯ ಯುಕ್ತವಾದ ಈ ದೀಕ್ಷಾತ್ರಯದಿಂದೆ ಸಂಬಂಧಿಸಿಕೊಂಬುದು; ಕ್ರಮವಾಗಿ ಶ್ರುತಿ ಗುರು ಸ್ವಾನುಭವಗಳಿಂದ ನಿಶ್ಚಿಯಿಸೂದಯ್ಯ ಶಾಂತವೀರೇಶ್ವರಾ ಇಂತಂದು ರೇಣುಕ ಗಣೇಶ್ವರನಿಂದ ಅಗಸ್ತ್ಯ ಋಷಿಗೆ ಉಪದೇಶವಾಯಿತು.