ಮತ್ತಮಾ ದೀಕ್ಷಾತ್ರಯವೆಂತೆಂದೊಡೆ:
ಆ ಮಲತ್ರಯ ರಹಿತವಾದ ಪರಶಿವನ ದೀಕ್ಷೆ ತಾನೆ
ವೇಧಾದೀಕ್ಷೆ, ಮಂತ್ರದೀಕ್ಷೆ, ಕ್ರಿಯಾದೀಕ್ಷೆ ಎಂದು
ಮೂರು ತೆರನಾಗಿರುತ್ತದೆ. ಅದಕ್ಕೆ ವಿವರ:
ಶ್ರೀ ಗುರು ತನ್ನ ಹಸ್ತವ ಶಿಷ್ಯನ
ಮಸ್ತಕದಲ್ಲಿರಿಸುವುದೆ ವೇಧಾದೀಕ್ಷೆ.
ಕರ್ಣದಲ್ಲಿ ಶಿವಮಂತ್ರವನುಪದೇಶಿಸಿವುದೇ ಮಂತ್ರದೀಕ್ಷೆ.
ಶಿಷ್ಯನು ಕರಸ್ಥಲದಲ್ಲಿ ಲಿಂಗವ
ಕೊಡುವುದೆ ಕ್ರಯಾದೀಕ್ಷೆಯಯ್ಯ ಶಾಂತವೀರೇಶ್ವರಾ