Index   ವಚನ - 154    Search  
 
ಮೂಲಾಭಿಷೇಚನದಿಂದ ತರು ಶಾಖೋಪಶಾಖಾದಿಗಳೆಲ್ಲಂ ಪಲ್ಲವಿಸುವಂತೆ ಪ್ರಾಣೋಪಹಾರದಿಂ ಸಕಲೇಂದ್ರಿಯ ಸಮೂಹವೆಲ್ಲವಂ ಪೋಷಿಪಂತೆ ಶಿವಾರ್ಚನೆಯೊಂದರಿಂದವೆ ದೇವತಾ ಸಂತುಷ್ಟಿಯಹುದಾಗಿ, ಶಿಲಾಮಯ ಲಿಂಗವನೆ ಬ್ರಹ್ಮನು, ಇಂದ್ರನೀಲಮಯ ಲಿಂಗವನೆ ವಿಷ್ಣುವು, ರತ್ನಮಯ ಲಿಂಗವನೆ ಇಂದ್ರನು, ಸವರ್ಣಮಯ ಲಿಂಗವನೆ ಕುಬೇರನು, ರಜತಮಯ ಲಿಂಗವನೆ ವಿಶ್ವದೇವರ್ಕಳು, ಪಿತ್ತಳೆ ಲಿಂಗವನೆ ವಾಯು, ಕಾಂಸ್ಯಮಯ ಲಿಂಗವನೆ ವಸುಗಳು, ಮೃಣ್ಮಯ ಲಿಂಗವನೆ ಅಶ್ವಿನಿ ದೇವರ್ಕಳು, ಸ್ಪಟಿಕಮಯ ಲಿಂಗವನೆ ಅಗ್ನಿ, ತಾಮ್ರಮಯ ಲಿಂಗವನೆ ಸೂರ್ಯನು, ಮುಕ್ತಾಫಳ ಲಿಂಗವ ಚಂದ್ರನು, ಬಹುವರ್ಣದ ಲಿಂಗವ ನಕ್ಷತ್ರಂಗಳು, ಮಣಿಮಯ ಲಿಂಗವ ಬುಧನು, ಕಾರ್ಬೋನ್ನ ಲಿಂಗವ ಶುಕ್ರನು, ವಿದ್ರುಮದ ಲಿಂಗವ ಮಂಗಳನು, ಮಾಣಿಕ್ಯದ ಲಿಂಗವ ಬೃಹಸ್ಪತಿ, ತಾಮ್ರದ ಲಿಂಗವ ಶನಿ, ಕುಶಮಯ ಲಿಂಗವ ಸಪ್ತ ಋಷಿಗಳು, ನೀಲದ ಲಿಂಗವ ಧ್ರುವನು, ಸ್ಥಾಣುನಾಮ ಲಿಂಗವ ಮಾರ್ಕಾಂಡೇಯನು, ದೂರ್ವಮಯ ಲಿಂಗವ ವಶಿಷ್ಠನು, ಸದಾಶಿವನಾಮಲಿಂಗವ ಸನತ್ಕುಮಾರಾದಿ ಯೋಗಿಗಳು, ಪ್ರವಾಳ ಲಿಂಗವ ನಾರ್ಕಗಳು, ಅಯೋಮಯ ಲಿಂಗವ ರಾಕ್ಷಸರು, ತ್ರಪುಮಯ ಲಿಂಗವ ಪಿಶಾಚರು, ತ್ರಿಲೋಹಮಯ ಲಿಂಗವ ಗುಹ್ಯಕರು, ವಜ್ರಮಯ ಲಿಂಗವ ಮಾತೃಕೆಗಳು, ಪ್ರಸೂನಮಯ ಲಿಂಗವ ಮನ್ಮಥನು, ನಾನಾಕಾರದ ಲಿಂಗವ ಲಕ್ಷ್ಮೀ ಸರಸ್ವತಿ ಶಚಿ ಮಾತೃಕಾದಿ ಮಹಾಶಕ್ತಿ ದೇವತೆಗಳಿಂತು ಬೇರೆ ಬೇರೆ ಲಿಂಗವನೆ ಪೂಜಿಸಿ ತಮ್ಮ ತಮ್ಮ ಪದಂಗಳಲ್ಲಿ ಸುಖಮಿರ್ಪರೆಂದೊಡೆ ಕೀಟಕ ಮನುಷ್ಯರೊಳು ಅರಿವರೆನ್ನುವರೆಲ್ಲರೂ ಸ್ವಯಂಭು ಲಿಂಗ, ಬಾಣಲಿಂಗ, ಚರಣಲಿಂಗ ಸಂಕೀರ್ಣಲಿಂಗ ಪ್ರಾಣಲಿಂಗವೆಂಬ ಪಂಚಲಿಂಗಂಗಳಂ ತಮ್ಮ ತಮ್ಮ ಶಕ್ತ್ಯಾನುಸಾರಮಾದರ್ಚನಾ ತತ್ಪರರಾಗಿರವೇಳ್ಕುಮೆಂಬುದನಂಗೀಕರಿಸಿ ಲಿಂಗಾರ್ಚನೆಯ ಮಾಳ್ಪುದಯ್ಯ ಶಾಂತವೀರೇಶ್ವರಾ