Index   ವಚನ - 48    Search  
 
ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ ಅವೆರಡರ ಸಂಸಂಧಿಯ ಜಗದಲ್ಲಿ ಇರಬಹುದೆ? ಇದರಂದವ ಹೇಳಿರಯ್ಯಾ. ತಾ ಕೊಂಡ ನೇಮದ ಸಂದೇಹವಲ್ಲದೆ, ಅವರಂದದ ಇರವ ವಿಚಾರಿಸಲಿಲ್ಲ. ಅದೆಂತೆಂದದಡೆ: ತಾನಿಹುದಕ್ಕೆ ಮುನ್ನವೆ ಅವು ಪುಟ್ಟಿದವಾಗಿ, ನೀರು ನೆಲ ಆರೈದು ಬೆಳೆವ ದ್ರವ್ಯಂಗಳೆಲ್ಲವು ಆಧಾರ ಆರೈಕೆ. ಇಂತೀ ಗುಣವ ವಾರಿಧಿಯನೀಜುವನಂತೆ ತನ್ನಿರವೆ ತನ್ನ ಸಂದೇಹಕ್ಕೆ ಒಡಲಾಗಿ ನಿಂದುದೆ ತನ್ನ ನೇಮ. ತನ್ನ ಹಿಂಗಿದುದೆ ಜಗದೊಳಗು ಎಂಬುದನರಿದ ಮತ್ತೆ ಸಂದೇಹದ ವ್ರತವ ಸಂದೇಹಕ್ಕಿಕ್ಕಲಿಲ್ಲ. ತಾ ಕೊಂಡುದೆ ವ್ರತ, ಮನನಿಂದುದೆ ನೇಮ. ಇದಕ್ಕೆ ಸಂದೇಹವೆಂದು ಒಂದನೂ ಕೇಳಲಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.