ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ
ಮುಂತಾದ ಜೀವಂಗಳೆಲ್ಲವು
ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ.
ತಮ್ಮ ತಮ್ಮ ವ್ಯವಹಾರಂಗಳಲ್ಲಿ
ಕೊಡುವ ಕೊಂಬುದೆ ಶೀಲ.
ಇಂತೀ ಜಾತಿ ವರ್ತಕದಲ್ಲಿ ನಡೆವ ಶೀಲವಂ ಬಿಟ್ಟು,
ಲಿಂಗವಂತ ಲಿಂಗ ಮುಂತಾಗಿ
ನಡೆವ ಶೀಲವೆಂತುಟೆಂದಡೆ:
ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ
ಕಾಯಕಂಗಳ ವಿವರವನರಿತು
ಪಾಪ ಪುಣ್ಯ ಬಹುಕಾಯಕಮಂ ಕಂಡು,
ತನ್ನ ವಂಶದ ಸ್ವಜಾತಿಯಂ ಬಿಟ್ಟು,
ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ
ಕೊಂಡು ಗಮನಕ್ಕೆ ಕಾಯಲಿಂಗ ಮನವರಿಕೆಯಾಗಿ,
ತ್ರಿಕರಣ ಶುದ್ಧಾತ್ಮನಾಗಿ,
ಅಂಗಕ್ಕೆ ಆಚಾರ, ಮನಕ್ಕೆ ಅರಿವು,
ಅರಿವಿಂಗೆ ಜ್ಞಾನ ನಿರ್ಧಾರವಾಗಿ ಕರಿಗೊಂಡುದೆ ವ್ರತ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಎಡೆದೆರಪಿಲ್ಲದ ನೇಮ.