Index   ವಚನ - 275    Search  
 
ಬಳಿಕ ರುದ್ರಾಕ್ಷ ಮಾಲೆಯಲ್ಲಿ ಮೇರು ಶೂನ್ಯವಾದ ಹನ್ನೊಂದು ಮಣಿ ಮಾಲಿಕೆಯಿಂದ ಏಕಾದಶ ರುದ್ರ ಪ್ರೀತಿ ಹದಿನೈದು ಮಣಿಮಾಲಿಕೆಯಿಂದ ಅಭಿಚಾರ ಕ್ರಿಯೆ ಇಪ್ಪತ್ತೈದು ಮಣಿಮಾಲಿಕೆಯಿಂದ ಮುಕ್ತಿ ಇಪ್ಪತ್ತಾರು ಮಣಿಮಾಲಿಕೆಯಿಂದ ಧನವೃದ್ಧಿ ಇಪ್ಪತ್ತೇಳು ಮಣಿಮಾಲಿಕೆಯಿಂದ ಸರ್ವಾರ್ಥ ಸಿದ್ಧಿ ಇಪ್ಪತ್ತೆಂಟು ಮಣಿಮಾಲಿಕೆಯಿಂದ ಪುಷ್ಟಿ ಮೂವತ್ತು ಮಣಿಮಾಲಿಕೆಯಿಂದರ್ಥಲಬ್ಧಿ ಮೂವತ್ತೆರಡು ಮಣಿ ಮಾಲಿಕೆಯಿಂದ ಜಯಲಕ್ಷ್ಮೀ ಅಯ್ವತ್ತು ಮಣಿಮಾಲಿಕೆಯಿಂದ ಕಾಮ್ಯ ಕರ್ಮ ಪ್ರಕೃತಿ ಐವತ್ತುನಾಲ್ಕ ಮಾಣಿಮಾಲಿಕೆಯಿಂದ ಸರ್ವಸಿದ್ಧಿ ನೂರ ಮಾಣಿಮಾಲಿಕೆಯಿಂದ ಕಾರ್ಯಪ್ರವೃದ್ಧಿ ನೂರಯ್ದು ಮಾಣಿಮಾಲಿಕೆಯಿಂದ ಭೋಗ ಮೋಕ್ಷಂದಗಳು ನೂರೆಂಟು ಮಣಿಮಾಲಿಕೆಯಿಂದ ಭುಕ್ತಿ ಮುಕ್ತಿಗಳವೆಂಬುದನೊಡಂಬಟ್ಟು, ಬಳಿಕಾ, ಮಾಲಿಕೆಗೆ ಆಮಳಕ ಫಲ ಪ್ರಮಾಣಿನ ಮಣಿಯ ಉತ್ತಮ, ಬದರಿ ಫಲ ಪ್ರಮಾಣಿನ ಮಣಿಯೆ ಮಧ್ಯಮ, ಚಣಕ ಪ್ರಮಾಣಿನ ಮಣಿಯೆ ಕನಿಷ್ಠಮಹುದದರಲ್ಲಿ ಅತೀ ಸ್ಥೂಲ ಅತಿ ಸೂಕ್ಷ್ಮ ಭಿನ್ನ ಲಘು ವ್ರಣ ಕಂಟಕ ಜೀರ್ಣ ಪೂರ್ವ ಧಾರಣಾದಿ ದೋಷವಿಲ್ಲದೆ ದೃಡ ವೃತ್ತ ಸುವರ್ಣ ದೃಷ್ಠ ಪ್ರೀತಿ ಮೊದಲಾದ ಸಲಕ್ಷಣಂಗಳುಳ್ಳ ಮಣಿಗಳಿಂದ ಆಯಾ ಮಾಲಿಕೆಗಳಿಗೆ ಚಿನ್ನ ಬೆಳ್ಳಿ ತಾಮ್ರ ಸೀಸ ಕಬ್ಬುನದು ಸರಿಗೆಗಳಾಗಲು ಪಂಚವರ್ಣದ ನೂಲಾಗಲಿ ಕರ್ಪಾಸದೆಳಿಯಾಗಲಿ ಅವರಲ್ಲಿ ನವೀನಮಾದ ಪವಿತ್ರಮಪ್ಪ ಸೂಕ್ಷ್ಮವಾದ ಇಪ್ಪತ್ತೇಳು ಎಳೆಗಳನೆ ಮುಪ್ಪುರಿಗೂಡಿದುದೆ ಮಧ್ಯಮ. ಮಾಣಿಮಾಲಿಕೆ ಹದಿನೈಯ್ದೆಳೆಯಿಂ ಮುಪ್ಪುರಿಗೂಡಿದುದೆ ಕನಿಷ್ಠ[ವು] ಮಾಣಿ ಮಾಲೆಗಹುದೆಂದರಿದು, ‘ಓಂ ಶುಭಾತ್ನನೆ ಪರಮಾತ್ಮನೆ ನಮಃ’ ಎಂಬ ಮಂತ್ರದಿಂ ಹೊಸೆದು ಸೂತ್ರ ಮಾಡಿ, ಮೇಲಾ ಮಂತ್ರಮಂ ಪಿಡಿದುದೆ ಮೂಲವಹುದು, ಅಡಿಗೂಡಿದುದೆ ಅಗ್ರವಹುದೆಂದರಿದು, ‘ಓಂ ಹೃದಯಾಯ ನಮಃ’ ಎಂಬ ಮಂತ್ರದಿಂದ ಸಂಸ್ಕರಿಸಿ ಮೇಲಾ ‘ಓಂ ಭವ್ಯಾಯ ನಮಃ’ ಎಂಬ ಮಂತ್ರದಿಂದ ಮಂತ್ರಿಸಿ ‘ಓಂ ನಂ ಸದ್ಯೋಜಾತಾಯ ನಮಃ’ ಎಂಬ ಮಂತ್ರದಿಂದ ಮಣಿಗಳ ತೊಳೆದು ‘ಓಂ ಮಂ ವಾಮದೇವಾಯ ನಮಃ’ ಎಂಬ ಮಂತ್ರದಿಂದಾ ಮಣಿಗಳನೊರಸೋದು. ಮೇಲೆ ‘ಓಂ ಶಿಂ ಅಘೋರಾಯ ನಮಃ’ ಎಂಬ ಮಂತ್ರದಿಂದ ಧೂಪವನಕ್ಕಿ ಓಂ ವಾಂ ತತ್ಪುರುಷಾಯ ನಮಃ’ ಎಂಬ ಮಂತ್ರದಿಂದ ಮಣಿ ಪುಂಜವನರ್ಚಿಸಿ ‘ಓಂ ಯಂ ಈಶಾನಾಯ ನಮಃ’ ಎಂಬ ಮಂತ್ರದಿಂದ ಪ್ರತ್ಯಕ್ಷ ಮಣಿಗಳಂ ಮಂತ್ರಿಸುತ್ತಿಂತು ಮಣಿಗಳಂ ಮಂತ್ರಿಸುತ್ತಿಂತು ಪರಿಶುದ್ಧಿಗೈವುದಯ್ಯ ಶಾಂತವೀರೇಶ್ವರಾ