Index   ವಚನ - 274    Search  
 
ಮತ್ತಮಾ ಮಂತ್ರ ಜಪಕ್ಕೆ ಮೊದಲು ಮೂಲಿಕೆಯಂ ಸಂಪಾದಿಸಬೇಕಾಗಿಹುದು. ಉತ್ತರೋತ್ತರ ಗುಣ ವಿಶಿಷ್ಟಮಾದ ಮೂಲಿಕೆಗಳೊಳಗೆ ಅಂಗುಲಿಗಳಿಂದಾದರು ಅಲ್ಲದೆ ಆ ಅಂಗುಲಿಗಳಲ್ಲಿ ಮಧ್ಯಮ ಅನಾಮಿಕೆಗಳೆರಡರ ಮಧ್ಯವೆರಡು ರೇಖೆಗಳು ಮೇರುವಾಗಿ ಮಿಕ್ಕ ಮಧ್ಯಾಂಗುಲಿಯ ಅಗ್ರ ರೇಖೆಯಿಂ ತೊಡಗಿ ಪ್ರದಕ್ಷಿಣಮಾಗಿ ಹತ್ತು ರೇಖೆಗಳನು ಅಂಗುಷ್ಠಾಗ್ರದಿ ಮುಟ್ಟಿ ಮುಟ್ಟಿ ಮಾಳ್ಪುದೆ ನಿತ್ಯ. ಕರ್ಮಾಧಿಕಕ್ಕೆ ಶಂಕದ ಮಾಣಿಮಾಲೆಯ ಐಶ್ವರ್ಯಾಧಿಕಕ್ಕೆ ಸ್ಫಟಿಕದ ಮಾಣಿಮಾಲೆಯ ಮೋಕ್ಷಧಿಕಕ್ಕೆ ಪದ್ಮಾಕ್ಷ ಮಾಲೆಯ ಪುಷ್ಟಿ ಲಕ್ಷ್ಯಾದಿಗಳಿಗೆ ಪುತ್ರ ಜೀವಿಯ ಮಣಿಮಾಲೆಯ ಪುತ್ರ ಪಶು ಧಾನ್ಯಾಭಿವೃದ್ಧಿಗಳಿಗೆ ಪವಳದ ಮಣಿಮಾಲಿಕೆಯ ಪಶು ಧನ ಧಾನ್ಯ ಸೌಭಾಗ್ಯ ಮುಕ್ತ್ಯಾದಿಗಳಿಗೆ ಮುಕ್ತಾ ಮಣಿಮಾಲೆಯ ಸರ್ವ ವಿದ್ಯಾದಿಗಳಿಗೆ ಮಾಣಿಕ್ಯದ ಮಣಿಮಾಲೆಯ ಲೋಕವಶ್ಯ ಸ್ತ್ರೀ ವಶ್ಯಾದಿಗಳಿಗೆ ಮರಕತದ ಶಿಲೆಗಳ ಮಾಣಿಮಾಲೆಯ ಶತ್ರು ಜಯಾದಿಗಳಿಗೆ ಪಾದರಸದ ಮಣಿಮಾಲೆಯ ಪೂರ್ವೋಕ್ತ ಸಕಲ ಕಾರ್ಯಂಗಳಿಗೆ ರುದ್ರಾಕ್ಷ ಮಾಲೆಯ ಭೋಗ ಮೋಕ್ಷಂಗಳಿಗಪ್ಪುವೆಂದೊಪ್ಪುಗೊಂಡು ಜಪಮಂ ಮಾಳ್ಪುದಯ್ಯ [ಶಾಂತವೀರೇಶ್ವರಾ]