Index   ವಚನ - 211    Search  
 
ಮೂರು ಪುರದ ಹೆಬ್ಬಾಗಿಲೊಳಗೊಂದು ಕೋಡಗನ ಕಟ್ಟಿರ್ದುದ ಕಂಡೆ. ಅದು ಕಂಡಕಂಡವರನೇಡಿಸುತ್ತಿದ್ದಿತ್ತು ನೋಡಾ! ಆ ಪುರದರಸು ತನ್ನ ಪಾಯದಳ ಸಹಿತ ಬಂದಡೆ, ಒಂದೆ ಬಾರಿ ಮುರಿದು ನುಂಗಿತ್ತ ಕಂಡೆ. ಆ ಕೋಡಗಕ್ಕೆ ಒಡಲುಂಟು ತಲೆಯಿಲ್ಲ. ಕಾಲುಂಟು ಹೆಜ್ಜೆಯಿಲ್ಲ, ಕೈಯುಂಟು ಬೆರಳಿಲ್ಲ. ಇದು ಕರ ಚೋದ್ಯ ನೋಡಾ, ತನ್ನ ಕರೆದವರ ಮುನ್ನವೆ ತಾ ಕರೆವುದು! ಆ ಕೋಡಗ ತನ್ನ ಬಸುರಲ್ಲಿ ಬಂದ ಮದಗಜದ ನೆತ್ತಿಯನೇರಿ, ಗಾಳಿಯ ದೂಳಿಯ ಕೂಡಿ ಓಲಾಡುತ್ತಿಹುದ ಕಂಡೆ! ವಾಯದ ಗಗನದ ಮೇಲೆ ತನ್ನ ಕಾಯವ, ಪುಟನೆಗೆದು ತೋರುತ್ತಿಹುದ ಕಂಡೆ! ಹತ್ತು ಮುಖದ ಸರ್ಪನ ತನ್ನ ಹೇಳಿಗೆಯೊಳಗಿಕ್ಕಿ, ಆಡಿಸುತ್ತಿಹುದ ಕಂಡೆ! ಐವರು ಕೊಡಗೂಸುಗಳ ಕಣ್ಣಿಂಗೆ, ಕನ್ನಡಕವ ಕಟ್ಟುತಿಹುದ ಕಂಡೆ! ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ, ಹುಬ್ಬೆತ್ತುತ್ತಿಹುದ ಕಂಡೆ! ಆ ಕೋಡಗದ ಕೈಯೊಳಗೆ ಮಾಣಿಕವ ಕೊಟ್ಟರೆ, ನೋಡುತ್ತ ನೋಡುತ್ತ ಬೆರಗಾದುದ ಕಂಡೆ! ಕೂಡಲಿಲ್ಲ ಕಳೆಯಲಿಲ್ಲ; ಗುಹೇಶ್ವರ[ನ]ನಿಲುವು, ಪ್ರಾಣಲಿಂಗಸಂಬಂಧವಿಲ್ಲದವರಿಗೆ ಕಾಣಬಾರದು.