ಆರು ಕೆಲಂಬರು ವೀರಭದ್ರೇವರಿಂ ಶಪಿಸಲ್ಪಟ್ಟವರು,
ಶಿವಭಕ್ತಿಗೆ ತಿರುಗಿದ ಮೋರೆಯುಳ್ಳವರು,
ಆರು ಕೆಲಂಬರು ಪರಮೇಶ್ವರಂಗೆ
ಮಿಕ್ಕಾದ ದೇವತೆಗಳಿಗೆ ಭಕ್ತರು,
ಆರು ಕೆಲಂಬರು ಶಿವದೀಕ್ಷಾ ಸಂಸ್ಕಾರಿಗಳಲ್ಲದವರು,
ಶುದ್ಧವಲ್ಲದ ಕ್ರಿಯೆಯ ಮಾಡುವರು,
ಆರು ಕೆಲಂಬರು ಪರಮೇಶ್ವರಂಗೆ
ಉಳಿದ ದೇವತೆಗಳು ಸರಿ ಎಂಬ
ಬುದ್ಧಿಯುಳ್ಳವರು ಅವರಿಗೆ ಪರಮೇಶ್ವರನ
ಈ ಪ್ರಸಾದ ಚತುರ್ವಿಧವು ಯೋಗ್ಯವಲ್ಲವೆಂದು
ಜೈಮಿನಿ ಸಂವಾದದಲ್ಲಿ ವ್ಯಾಸ ಹೇಳಿದನಯ್ಯ
ಶಾಂತವೀರೇಶ್ವರಾ