ನಾಲ್ಕು ಮೂಲೆಯನ್ನುಳ್ಳ ಐದು ಪಾದ ನೀಳವಾದ
ಇಪ್ಪತ್ತು ಪಾದ ಸುತ್ತಳತೆಯನುಳ್ಳ ಹಾಂಗೆ
ಆಳವು ಒಂಬತ್ತು ಪಾದವೆಂದು ಹೇಳಲಾಗಿದೆ.
ಆ ಸಮಾಧಿಯನು ಉತ್ತರ ದಿಕ್ಕಿಗೆ ಮುಖವಾಗಿ ಅಗೆವುದು.
ಒಂದನೆಯ ಸೋಪಾನ ಪಾದದಲಿ ಒಂದು ಪಾದದೂಚ
ಅದರೆ ಕಳಸಸಮಾಧಿ.
ಮೇಲೊಂದು ಪಾದ ಪ್ರಮಾಣ ಕೆಳಗೊಂದು ಪಾದ ಪ್ರಮಾಣ
ಎಡ ಬಲದಲ್ಲಿ ಮೂರು ಪಾದದಗಲವಾಲದು
ಗೋಮುಖ ಸಮಾಧಿ ಎನಿಸುವುದು.
ಎರಡನೆಯ ಸೋಪಾನ ಎರಡು ಪಾದದೂಚ
ಮೇಲೆರಡು ನೀಳ ಎಡಬಲದಲ್ಲಿ ಮೂರು ಪಾದದ ಅಗಲ
ಮೂರನೆಯ ಸೋಪಾನ
ಮೇಲೆ ಮೂರು ಪಾದ ನೀಳ
ಎಡಬಲದಲ್ಲಿ ಮೂರು ಪಾದದ ಅಗಲ,
ಮೂರನೆಯ ಸೋಪಾನ ಮೇಲೆ
ಮೂರು ಪಾದ ನೀಳ ಎಡಬಲದಲ್ಲಿ
ಮೂರು ಪಾದದಗಲ ಘಾತ ಮೂರು ಪಾದವಾದ ಪ್ರಮಾಣವು
ಹೀಂಗೆ ಉತ್ತರ ದಕ್ಷಿಣ ಹನ್ನೊಂದು ಪಾದ ಪ್ರಮಾಣದ
ಸಮಾಧಿಯ ಮಧ್ಯದಲ್ಲಿ ಮೂರಡಿಯಷ್ಟು ಜಗಲಿಯನು ಮಾಡಿ
ಆ ಜಗಲಿಯ ದಕ್ಷಿಣ ದಿಕ್ಕಿನಲ್ಲಿ ಮೂರು ಉಂಚ
ಆ ಟಾಕಿನೊಳಗಣ ವದನ ಮಸ್ತಕದ ಮೇಲೆ
ಎಂಟು ಸೇರು ಭಸಿತ ಪಂಚಲೋಹದ ಚೂರ್ಣವ ಸುರಿದು
ಎಡಬಲದಲ್ಲಿ ಒಂದು ಅರೆಪಾದ ಅರಿತು ನಾಲ್ಕು ದಿಕ್ಕು ಸಹ
ಒಂಬತ್ತು ಪಾದ ಪ್ರಮಾಣದಲ್ಲಿ ತ್ರಿಕೋಣೆಯಂ ಮಾಡುವುದು.
ತ್ರಿಕೋಣೆ ಎಂದರೆ ಟಾಕಿನ ಗೂಡು.
ಆ ಸಮಾಧಿಯ ಸ್ಥಳದ ಆಳವು ಅಳೆತ್ತು ಕೈಉದ್ದವು
ಎಂದು ತಿಳಿಯತಕ್ಕದ್ದು.
ಆ ಸಮಾಧಿಯ ಒಳಗಣ ವೇದಿಕೆಯ ಮೇಲೆ ಆ ಶವವನು ಕುಳ್ಳರಿಸಿ.
ಚರಪಾದೋದಕದಿಂ ಮುಖದೊಳೆದು ಅಷ್ಟವಿಧಾರ್ಚನೆಯಂ ಮಾಡಿ
ಆ ಶ್ರವಕ್ಕೆ ಏಳುಮೊಳದರಿವೆಯ ಚೀಲವ ಹೊಲಿದು ತೊಡಿಸಿ
ಆ ಸಮಾಧಿಯ ನಾಲ್ಕು ದಿಕ್ಕಿನಲ್ಲಿ
ತೈಲದಿಂದಲಾದರು ತುಪ್ಪದಿಂದಲಾದರು ಪೂರಿತವಾದ
ನಾಲ್ಕು ಜ್ಯೋತಿಗಳ ಮುಟ್ಟಿಸಿ
ನಾಲ್ಕು ಮೂಲೆಯಲ್ಲಿ ನಾಲ್ಕು ಲಿಂಗಮುದ್ರೆಯ ತಗಡುಗಳನ್ನು
ಚರಪಾದೋದಕದಿಂದ ತೊಳೆದು
ಅರ್ಚಿಸಿ ಸ್ಥಾಪ್ಯವ ಮಾಡಿ ತದನಂತರದಲ್ಲಿ
ಮೂರು ಮೂಲೆಯನುಳ್ಳ ಟಾಕಿನ ಗೂಡಿನಲ್ಲಿ
ಪದ್ಮಾಸನದೊಡನೆ ಕೂಡುವ ಹಾಂಗೆ ಕುಳ್ಳರಿಸಿ
ಚೀಲವ ತೊಡಿಸಿದ ಬಳಿಕ
ಪ್ರಣವವ ಸಂಬಂಧಿಸುವ ಕ್ರಮವೆಂತೆಂದೊಡೆ:
‘ಅ’ ಕಾರವ ಎಡದ ಬದಿಯಲ್ಲಿಡುವುದು.
‘ಉ’ ಕಾರವ ಬಲದಬದಿಯಲ್ಲಿದುವುದು
‘ಮ’ ಕಾರವ ನಡುಬೆನ್ನಿನಲ್ಲಿಡುವುದು.
‘ಹ’ ಕಾರವ ಮಸ್ತಕದಲ್ಲಿಡುವುದು.
‘ಓಂ’ ಕಾರವ ದಕ್ಷಿಣ ದಿಕ್ಕಿನಲ್ಲಿಡುವುದು.
ಇದು ಪಂಚಪ್ರಣವ ಸಂಬಂಧವು.
‘ಬಸವ’ ಎಂಬ ಮೂರಕ್ಷರ ಮುಂದೆಸೆ ಸಂಬಂಧ.
‘ಅಉಮ’ ಎಂಬ ಮೂರಕ್ಷರ ಹಿಂದೆಸೆ ಸಂಬಂಧ.
‘ಓಂ ನಮಃ ಶಿವಾಯ’ ಎಂಬ
ಆರಕ್ಷರ ಎಡದ ಬದಿಯಲ್ಲಿ ಸಂಬಂಧ. ‘ಹ್ರಾಂ ಹ್ರೀಂ ಹ್ರೂಂ ಹ್ರೈ ಹ್ರಂ
‘ಹ್ರಃ’ ಎಂಬ
ಆರಕ್ಷರ ಬಲದಲ್ಲಿ ಸಂಬಂಧ,
‘ಓಂ’ ಕಾರವೆ ಊರ್ಧ್ವದಲ್ಲಿ ಸಂಬಂಧ,
‘ನ’ ಕಾರವೆ ಬಲದ ಭುಜದ ಸಂಬಂಧ,
‘ಮ’ ಕಾರವೆ ವಾಮ ಭುಜದ ಸಂಬಂಧ,
‘ಶಿ’ ಕಾರವೆ ಹೃದಯದಲ್ಲಿ ಸಂಬಂಧ,
‘ವಾ’ ಕಾರವೆ ಬಲದೊಡೆಯಲ್ಲಿ ಸಂಬಂಧ,
‘ಅ’ ಕಾರವೆ ಪ್ರಣವವ ಓಂ ನಮಃ ಶಿವಾಯ ಎಂಬ
ಈ ಸಪ್ತಪ್ರಣವಂಗಳ ಎಡದ ಬದಿಯಲ್ಲಿ ಸಂಬಂಧಿಸುವುದು.
‘ಓಂ’ ಕಾರ ಪ್ರಣವವ “ಹ್ರಾಂ ಹ್ರೀಂ ಹ್ರೂ ಹ್ರೈ ಹ್ರಂ ಹ್ರಃ ಎಂಬೀ
ಸಪ್ತ ಪ್ರಣವಂಗಳ ಬಲದ ಬದಿಯಲ್ಲಿ ಸಂಬಂಧಿಸುವುದು.
‘ಓಂ’ ಕಾರ ಪ್ರಣವ ‘ಅಉಮ’ ಯೆಂಬೀ ನಾಲ್ಕು ಪ್ರಣವಂಗಳ
ಬೆನ್ನಿನಲ್ಲಿ ಸಂಬಂಧಿಸುವುದು.
‘ಉ’ ಕಾರ ಪ್ರಣವವ ‘ಬಸವಾ’ ಎಂಬೀ ನಾಲ್ಕು ಪ್ರಣವಂ ಮುಂದೆ
ಎದೆಗೂಡಿನಲ್ಲಿ ಸಂಬಂಧಿವುದು.
‘ಹ’ ಕಾರ ಪ್ರಣವವ ಮಸ್ತಕದಲ್ಲಿ ಸಂಬಂಧಿಸುವುದು.
‘ವ’ ಕಾರ ಪ್ರಣವವ ಎಡದ ತೊಡೆಯಲ್ಲಿ ಸಂಬಂಧಿಸುವುದು.
ಇಂತೀ ಸಪ್ತಸ್ಥಾನದಲ್ಲಿ ಸಪ್ತ ಜ್ಙಾನಿಗಳು
ಸಂಬಂಧವ ಮಾಡುವುದಯ್ಯ ಶಾಂತವೀರೇಶ್ವರಾ