Index   ವಚನ - 532    Search  
 
‘ಓಂ’ ಕಾರವೆ ಮುಖದಲ್ಲಿ ಸಂಬಂಧ. ‘ಶಿ’ ಕಾರವನು ದೇಹಮಧ್ಯವಾದ ಗುದ ಗುಹ್ಯಂಗಳ ನಡುವೆ ಸಂಬಂಧಿಸುವುದು. ‘ನ’ ಕಾರವೆ ಬಲದ ಭುಜದ ಸಂಬಂಧವು. ‘ಮ’ ಕಾರವೆ ವಾಮ ಭುಜದ ಸಂಬಂಧ. ‘ವ’ ಕಾರವೆ ಬಲದೊಡೆಯ ಸಂಬಂಧ. ‘ಯ’ ಕಾರವೆ ಎಡದೊಡೆಯ ಸಂಬಂಧ. ‘ಲಿಂ’ ಎಂಬುದು ಆಧಾರಚಕ್ರದಲ್ಲಿ ‘ಗ’ ಕಾರವನು ಬ್ರಹ್ಮರಂಧ್ರದಲ್ಲಿ ಸಂಬಂಧಿಸುವುದಯ್ಯ. ಇಂತೀ ಅಷ್ಟ ಪ್ರಣವ ಸಂಬಂಧವನೆಲ್ಲರು ಸಂಬಂಧಿಸುತ್ತಿಹರು. ಇಂತೀ ಪ್ರಣವ ಸಂಬಂಧಾನಂತರದೊಳ್ ವಿಭೂತಿಯಿಂದೆ ಎದೆ ಪರ್ಯಂತರ ತುಂಬಿ ಉಳಿದ ಮೇಲಾದ ಶರೀರವನು ವಿಭೂತಿ ಬಿಲ್ವಪತ್ರಂಗಳೊಡನೆ ಕೂಡುವ ಹಾಂಗೆ ಮಸ್ತಕ ತನಕ ಸಂಬಂಧಿಸುವುದಯ್ಯ. ಬಳಿಕ ಮಣ್ಣನು ತುಂಬುವದು. ಆ ಸಮಾಧಿಯ ಮೇಲೆ ಜಗಲಿಯನು ಮಾಡುವುದು. ಇದು ಕ್ರಿಯೆಯ ಒಡನೆ ಕೂಡಿದ ಶಿವಯೋಗ ಸಮಾಧಿಯಯ್ಯ ಶಾಂತವೀರೇಶ್ವರಾ