Index   ವಚನ - 554    Search  
 
ಮೂಲಭಿನ್ನ ವೃಕ್ಷದಲ್ಲಿ ಹೇಂಗೆ ಪತ್ರೆ ಫಲ ಪುಷ್ಪಂಗಳಾದವು? ಹಾಂಗೆ ಅಜ್ಞಾನಿ ಗುರುವಿನಲ್ಲಿ ಉಪದೇಶವಾದ ಶಿಷ್ಯಂಗೆ ಹೇಂಗೆ ಜ್ಞಾನವಾದೀತು? ಗುರುವೆ ‘ಸದ್ರೂಪೆಂ’ಬುದನು ತಾಮಸ ಶಿಷ್ಯ ತಿಳಿಯನು. ಶಿಷ್ಯನೆ ‘ಚಿದ್ರೂಪೆಂ’ಬುದನು ತಾಮಸ ಗುರು ತಿಳಿಯನು. ‘ಕೋಹಂ’ ಎಂದು ಬಂದೆರಗಿದ ಶಿಷ್ಯಂಗೆ ‘ಸೋಹಂ’ ಎಂಬ ನಿಜ ತತ್ತ್ವವನರುಹಿದಾತನೆ ಜ್ಞಾನಚಾರ್ಯನು. ಶಿಷ್ಯನ ಭೇದವನರಿದು ಆಸೆಯಿಲ್ಲದೆ ಉಪದೇಶಿಸಿದಾತನೆ ಗುರು. ದ್ರವ್ಯದಾಸೆಯಿಂದ ಅಜ್ಞಾನಿಗೆ ಉಪದೇಶಿಸಿದ ಉಪದೇಶವಾದ ಗುರುಶಿಷ್ಯರಿಗೆ ಭವಬಿಡದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಇದಿರಿಟ್ಟು ತೋರಿದ ತಮಸ್ಸನು ನಿರಸನಮಂ ಮಾಡಿದ ಶರಣನು ಸುಜ್ಞಾನವನು ನಿರ್ದೇಶಿಸಿ ಸ್ಥಿರತ್ವವನೆಯ್ದುತ್ತಿರಲಾಗಿ ಮುಂದೆ ‘ನಿರ್ದೇಶನಸ್ಥಲ’ವಾದುದು