Index   ವಚನ - 561    Search  
 
ಆಚಾರ ಕರ್ಪರ ಸೋಮ್ಮ ತೋರಿ ಬೇಡೂದು. ವಿಚಾರ ಕರ್ಪರ ಲಾಂಛನ ತೋರಿ ಬೇಡೂದು. ಅವಿಚಾರ ಕರ್ಪರ ಸೊಮ್ಮ ಸಂಬಂಧ ನೇಮಶೀಲವ ಮೀರಿ ಬೇಡೂದಾಗಿ ನಿರುಪಾಧಿಕವಾದುದು. ಧೃತಿಗೆಟ್ಟು ಕಂಡಲ್ಲಿ ಶಿವನ ತೋರಿ, ಮತಿಗೆಟ್ಟು ಮೂಲ ಮಂತ್ರವನಲ್ಲಿಗಲ್ಲಿಗೆ ಉಸುರಿ, ಗತಿಗೆಟ್ಟು ದೊರಕಿದಲ್ಲುಂಡು ಜಡೆ ಮುಡಿ ಲೋಚು ಬೋಳು ದಿಗಂಬರಾದಿ ಲಾಂಛನವನು ತೋರಿ, ಶೀಲ ವ್ರತಾದಿಗಳಿಂದಾಚರಿಸುವುದುಪಾಧಿಯಿಂದೆ. ಉದರ ಪೋಷಣೆಯ ಮಾಡುವವರಲ್ಲಿಲ್ಲ ಶಿವನು. ಭಯ ಭಕ್ತಿ ಕರುಣೆ ಕಿಂಕುರ್ವಾಣ ಸತ್ಯ ಸದಾಚಾರಿಗಳಲ್ಲಿಪ್ಪನಯ್ಯ ಶಾಂತವೀರೇಶ್ವರಾ