ಆವುದಾನೊಂದು ಪರಬ್ರಹ್ಮದಿಂ
ಪೀತ ಶ್ವೇತ ಹರೀತ ಕೃಷ್ಣ ಕಪೋತ ಮಾಂಜಿಷ್ಠವೆಂಬ
ಷಡ್ರೂಪನು ಶಿವಲಿಂಗದೊಡಗೂಡಿ,
ಮಧುರ ಪೊಗರು ಖಾರ ಹುಳಿ ಕಹಿ ಲವಣವೆಂಬ ಷಡ್ರಸವನು
ಗುರುಲಿಂಗದೊಡನೆ ಕೂಡಿ,
ಗಂಧ ಕತ್ತುರಿ ಕಮ್ಮೆಣ್ಣೆ ಪುಣುಗು ಜವಾದಿ ಮೊದಲಾದ
ಗಂಧವನು ಆಚಾರಲಿಂಗದೊಡಗೂಡಿ,
ತಾಳ ಕೌಸಳವಿಡಿದು ಹುಟ್ಟಿದ
ಶಬ್ದ ತಂತಿವಿಡಿದು ಹುಟ್ಟಿದ
ಶಬ್ದ ಮೊದಲಾದ ಶಬ್ದವನು ಪ್ರಸಾದಲಿಂಗದೊಡಗೂಡಿ,
ಕಠಿಣ ಮೃದು ಶೀತ ಅನುಷ್ಠ
ಶೀತ ಸ್ಪರ್ಶಂಗಳನು ಜಂಗಮ ಪ್ರಸಾದಲಿಂಗದೊಡಗೂಡಿ,
ರತಿಕ್ರೀಡೆಗಳನು ಇವೆಲ್ಲರಲ್ಲಿಯ
ತೃಪ್ತಿಯನು ಮಹಲಿಂಗದೊಡಗೂಡಿ, ಈ ಷಡ್ಲಿಂಗಗಳನು ತನ್ನ
ಷಟ್ಸ್ಥನದಲ್ಲಿ ಒಳಕೊಂಡು
ತನ್ನ ಕರಸ್ಥಲದಲ್ಲಿ ಒಪ್ಪುವ ಇಷ್ಟಬ್ರಹ್ಮದಿಂದವೆ
ವಿಶೇಷವಾಗಿ ಅರಿವುತ್ತಲಿಹನು.
ಎಲ್ಲವೂ ಲಿಂಗಾರ್ಪಣವಲ್ಲದೆ
ಉಳಿವುದೇನೂ ಇಲ್ಲವಯ್ಯ
ಶಾಂತವೀರೇಶ್ವರಾ
1081