ಆ ಲಿಂಗಸ್ಥಲದಲ್ಲಿಯಾದೊಡೆ
ಅಂಗಸ್ಥಲ ಮೊದಲಲ್ಲಿ ತೋರಿದ
ಭಕ್ತಸ್ಥಲದಲ್ಲಿ ಅಂತರ್ಗತವಾದ
ಗುರುಕಾರುಣ್ಯಸ್ಥಲದಲ್ಲಿ ಆಶ್ರಯಿಸಿದ ಭಕ್ತಂಗೆ
ಆಚಾರಲಿಂಗವು ಮರಳಿ ಆ ಆಚಾರಲಿಗಕ್ಕೆಯೆ
ಗುರುಲಿಂಗ ಜಂಗಮ ರೂಪದಿಂದ ಮೂರು ವಿಧವು.
ಮೊದಲು ಲಿಂಗಸ್ಥಲದಲ್ಲಿಯೆ ಪ್ರಾತಿಪಾದಿಸಿ
ಆ ಭೇದಂಗಳನು ಉಪದೇಶಿಸುವುದಕ್ಕೆ
ಲಿಂಗಷಟ್ಸ್ಥಲವನು ಉಪದೇಶಿಸುತ್ತಿದ್ದನು.
ಭಕ್ತನಿಂದ ಉಪಾಸನೆಯ ಮಾಡುವ ಆಚಾರಲಿಂಗವೆ
ಗುರುಲಿಂಗ ಜಂಗಮಸ್ವರೂಪದಿಂದ
ಮೂರು ವಿಧವು ಆಗುವುದು.
ಮರಳಿ ಅದೆ ಬೇರೆ ಬೇರೆ
ಮೂರು ಮೂರು ವಿಧವಾಗುವುವು.
ಆ ಹಾಂಗಾಗುತ್ತಿರಲು ಭಕ್ತನೆ
ದೀಕ್ಷಾಗುರು ಶಿಕ್ಷಾಗುರು ಜ್ಞಾನಗುರುವೆಂಬ ಮೂವರನು
ತ್ಯಾಗಾಂಗ ಭೋಗಾಂಗ ಯೋಗಾಂಗ ರೂಪದಿಂದ
ಅನುಸಂಬಂಧಿಸಿ ಮೂರುತೆರನಾದ
ಗುರುಗಳು ಕಾರುಣ್ಯದಿಂದ ತ್ರಿವಿಧಾಂಗದಲ್ಲಿ ಕ್ರಿಯಾಲಿಂಗದಲ್ಲಿ
ಕ್ರಿಯಾಲಿಂಗ ಭಾವಲಿಂಗ ಜ್ಞಾನಲಿಂಗವೆಂಬ
ಮೂರು ಲಿಂಗಗಳನು ಕ್ರಮದಿಂದ ಧಾರಣಗೆಯ್ದು
ಆ ಪ್ರಕಾರವಾದ
ಲಿಂಗದ ಸ್ವಯ ಚರ ಪರ ರೂಪವಾದ
ಜಂಗಮವೆಂದು ಈಕ್ಷಿಸಿ ಆ ಜಂಗಮವೆ ಪ್ರಾಣವು,
ಅದೇ ಮಂತ್ರವು, ಆ ಮಂತ್ರದ
ಉಚ್ಛಾರಣೆಯಲ್ಲಿ ತತ್ಪರನಾದ ಭಕ್ತನು
ಮೂರು ಬಗೆಯಿಂದ
ಜಂಗಮಕ್ಕೆ ದಾಸೋಹ ಭಾವದಿಂದಿರಲು ತಕ್ಕಾತನಯ್ಯ
ಶಾಂತವೀರೇಶ್ವರಾ