Index   ವಚನ - 685    Search  
 
ಉದಾಸೀನದಿಂದ ಮಾಡಿದುದನಂಗೀಕರಿಸದೆ ಭಯ ಭಕ್ತಿಯಿಂದ ಮಾಡಿದುದ ಕೈಕೊಂಡು ಗಂಧಾದಿ ಷಡ್ವಿಧ ಪದಾರ್ಥವನು ಷಡಿಂದ್ರಿಯಗಳಲ್ಲಿರ್ದ ಷಡ್ಲಿಂಗಗಳಿಗೆ ಅರ್ಪಿಸಿ ಆ ಪ್ರಸಾದವ ಕೊಂಡು ಸುಖಿಯಾಗಿ ಲೋಕದ ನುಚ್ಚು ಮಚ್ಚ ಬಿಟ್ಟು ಶಿವಧ್ಯಾನ ಶಿವಜ್ಞಾನಭಿಕ್ಷಾಹಾರ ಏಕಾಂತ ಉಳ್ಳಾತನಾಗಿ ಈ ನಾಲ್ಕು ಕರ್ಮಂಗಳಲ್ಲದೆ ಐಯ್ದನೆ ಕರ್ಮವಿಲ್ಲದಾತನಾಗಿ ಇದ್ದಲ್ಲಿಯೆ ಇರುವಾತನೆ ಸ್ವಯಲಿಂಗ ಜಂಗಮವಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಸ್ವಯಂಭಾವದಲ್ಲಿ ನಿಶ್ಚಲವಾದ ಲಿಂಗವು ಭಕ್ತನಂಗದಲ್ಲಿ ನಿಂದು ಭಕ್ತಿಕಾರಣವಾಗಿ ಚರಿಸುವ ಚರಲಿಂಗದ ಭೇದವೆಂತಿದ್ದಿತ್ತೆಂದೊಡೆ ಮುಂದೆ ‘ಚರಸ್ಥಲ’ವಾದುದು.ಸ್ವಯಂಸ್ಥಲಾನಂತರದಲ್ಲಿ ಸ್ವಯಜಂಗಮವೆ ಜಡೆ ಮುಡಿ ಲೋಚು ಬೋಳು ಮೊದಲಾದ ಶಿವಲಾಂಛನವನು ಧರಿಸಿ ಚಿರಾಂಬರಾಖ್ಯ ನಾರ ವಸ್ತ್ರವನು ಹೊದೆದು ಲೋಕವನುದ್ಧರಿಸುತ್ತಲೆ ಮೋಕ್ಷವನರಿವುತ್ತಿದ್ದಾತನಾಗಿ ಏಕಾಂಬರ ಉಳ್ಳಾತನಾಗಿ ವಪನಕ್ರಿಯೆಯುಳ್ಳವನಾಗದ ಭಿಕ್ಷೆಗೊಸುಗ ಗ್ರಾಮವನು ಹೊಗುವುನು. ಸಾಯಂಕಾಲ ಪರ್ಯಂತವು ಪ್ರದಕ್ಷಣದಿಂದ ಜಿಗುಪ್ಸಾ ರಹಿತನಾಗುವ ಭಿಕ್ಷೆಯಂ ಬೇಡುತ್ತಿರ್ಪನಯ್ಯ ಶಾಂತವೀರೇಶ್ವರಾ