Index   ವಚನ - 16    Search  
 
ಮತ್ತಮಾ ಚಿರಂ ನಿರ್ವಾಣದೀಕ್ಷೆಯು, ಆಜ್ಞಾದೀಕ್ಷೆಯು, ಉಪಮಾದೀಕ್ಷೆ ಸ್ವಸ್ವಿಕಾರೋಹಣ, ವಿಭೂತಿಪಟ್ಟ, ಕಲಶಾಭಿಷೇಕ, ಲಿಂಗಾಯತ, ಲಿಂಗಸ್ವಾಯತಗಳೆಂದು ಏಳು ಪ್ರಕಾರವು. ಅವರೊಳು ಗುರುವಿನಾಜ್ಞಾಪಾಲನದಲ್ಲಿ ಸಮರ್ಥವಾದುದು ಆಜ್ಞಾದೀಕ್ಷೆ ಎನಿಸಿಕೊಂಬುದು. ಪುರಾತನರುಗಳ ಸಮಯಾಚಾರಕ್ಕೆ ಸದೃಶ್ಯವಾದುದು ಉಪಮಾದೀಕ್ಷೆ ಸ್ವಸ್ತಿಕವೆಂಬ ಮಂಡಲದ ಮೇಲೆ ಶಿಷ್ಯನ ಕುಳ್ಳಿರಿಸಿ, ಮಂತ್ರನ್ಯಾಸಮಂ ಮಾಡಿ, ಮಂತ್ರಪಿಂಡವಾಗಿ ಮಾಡುವದು ಸ್ವಸ್ತಿಕಾರೋಹಣ, ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಗಳಿಂ ವಿಭೂತಿಧಾರಣವು ವಿಭೂತಿಯಪಟ್ಟ, ಪಂಚಕಲಶಂಗಳಲ್ಲಿ ತೀರ್ಥೋದಕಗಳಂ ತುಂಬಿ ಶಿವಕಲಾ ಸ್ಥಾಪನಂ ಮಾಡಿ, ಆ ಕಲಶದೋಕಂಗಳಿಂ ಶಿಷ್ಯಂಗೆ ಸ್ನಪನವಂ ಮಾಡೂದು ಕಲಶಾಭಿಷೇಕ. ಆಚಾರ್ಯನು ಶಿಷ್ಯಂಗೆ ಉಪದೇಶಿಸಲ್ತಕ್ಕ ಲಿಂಗಮಂ ತಾನು ಅರ್ಚನೆಯಂ ಮಾಡಿ, ಶಿಷ್ಯನಂ ನೋಡಿಸುವುದು ಲಿಂಗಾಯತವೆನಿಸಿಕೊಂಬುದು. ಆ ಶ್ರೀಗುರುನಾಥನಿಂದುಪದಿಷ್ಟವಾದ ಪ್ರಾಣಲಿಂಗವನು ಶಿಷ್ಯನು ಭಕ್ತಿಯಂ ಸ್ವೀಕರಿಸಿ, ತನ್ನ ಉತ್ತಮಾಂಗಾದಿ ಸ್ಥಾನಂಗಳಲಿ ಧರಿಸೂದು ಲಿಂಗಸ್ವಾಯತವೆನಿಸಿಕೊಂಬುದು. ಇಂತೆಂದು ಕಾಮಿಕಂ ಪೇಳೂದಯ್ಯ, ಶಾಂತವೀರಪ್ರಭುವೇ.