Index   ವಚನ - 74    Search  
 
ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ ನ್ಯಾಸತ್ರಯಂಗಳ ಉತ್ಪತ್ತಿ ಸ್ಥಿತಿ ಸಂಹಾರ ಭೇದಂಗಳಂ ಪೂರ್ವೋಕ್ತ ಕ್ರಮದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸವಹುದು, ಬ್ರಹ್ಮಚಾರಿಗೆ ಉತ್ಪತ್ತಿನ್ಯಾಸವಹದು, ವಾನಪ್ರಸ್ಥಯತಿಗಳಿಗೆ ಸಂಹಾರನ್ಯಾಸವಹುದೆಂದನುವದಿಸಿ, ಬಳಿಕ ಅಂಗುಷ್ಠದಿಂ ಮೋಕ್ಷ, ತರ್ಜನಿಯಂ ಶತ್ರುಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಧಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು ಜಪಂಗೆಯ್ವುದೆ ಕನಿಷ್ಠವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯ್ದು, ತರ್ಜನ್ಯಂಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ ಮಾನಸಜಪಂಗೆಯ್ವದವರ ಅಲ್ಲಿ ಪರಶ್ರುತಿ ಗೋಚರವಪ್ಪದೆ ಉಚ್ಚರಿಪುದೆ ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ ಉಪಾಂಶುವಹುದು, ಮಂತ್ರವಾಕ್ಯರ್ಥಚಿಂತೆನಂಗೆಯ್ವದೆ ಮಾನಸವಹುದು. ಅವರೊಳಗೆ, ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ ಶಾಂತವೀರೇಶ್ವರಾ.