Index   ವಚನ - 77    Search  
 
ಬಳಿಕಾ ಮಂತ್ರಂಗಳಿಗೆ ಆತ್ಮಗರ್ಭ ಶಿವಗರ್ಭ ಶಕ್ತಿಗರ್ಭ ಗರ್ಭತ್ರಯಯುಂಟವರಲ್ಲಿ ಆತ್ಮಗರ್ಭಮಾಗೆ ಸುಪ್ತಲೀಲಾ ಸಮರ್ಥವಹುದು, ಶಿವಗರ್ಭಮಾಗೆ ನಪುಂಸವಹುದು, ಶಕ್ತಿಗರ್ಭಮಾಗೆ ಭುಕ್ತಿ ಮುಕ್ತಿಪ್ರದವಹುದೆಂದೀ ಕ್ರಮವರಿದಿಂತು ವಿದ್ಯುಕ್ತಮಾಗಿ ಜಪಂಗೆಯ್ದು, ಜಪಸಮಾಪ್ತಿಯಾದ ಮೇಲೆಯೂ ಪೂರ್ವೋಕ್ತಮಾದ ವಿಧಿಗೆ ವಿಪರೀತಮಾದ ಪ್ರಾಣಾಯಾಮತ್ರಯದಿಂದ ಮೊದಲಂತೆ ಛಂದೃಷಿ ದೇವತಾದಿಗಳಿಂ ವಿಧಿಸಿ, ಸ್ಮರಿಬೇಕೆಂದು ವಿಧಿಸಿ, ಬಳಿಕೀ ಮಂತ್ರಾದಿ ಸಕಲ ಕ್ರಿಯೆಗಳಂ ಶ್ರೀಗುರೂಪದೇಶದಿಂದಭ್ಯಾಸಂಗೆಯ್ಯ, ಸರ್ವಾರ್ಥಸಿದ್ಧಿಯಹುದಲ್ಲದೆ ಯುಕ್ತಿಶಾಸ್ತ್ರದಿಂದನುಷ್ಟಿಸಲಾಗದೆಂದು ದೃಢವಿಡಿದು, ಅನಂತ[ರ]ದೊಳಿಂತು ಭಸಿತ ರುದ್ರಾಕ್ಷ ಪಂಚಾಕ್ಷರ ಮಂತ್ರವಿಧಾನಸಿದ್ಧನಾದ ಶುದ್ಧಶೈವಂಗೆ ಶಿವಾರ್ಚನವೆ ಕರ್ತವ್ಯವಹುದಲ್ಲಿ ಮೂಲಾಭಿಷೇಚನದಿಂ ತುರಶಾಖೋಪಶಾಖಾದಿಕವೆಲ್ಲಂ ಪಲ್ಲಿವಿಸುವಂತೆ, ಪ್ರಾಣೋಪಹಾರದಿಂ ಸಕಲೇಂದ್ರಿಯ ಸಮೂಹವೆಲ್ಲಂ ಪರಿಪೋಷಿಸುವಂತೆ ಶಿವಾರ್ಚನಮೊಂದರಿಂದಖಿಳ ದೇವತಾಸಂತುಷ್ಟಿಯಹುದಾಗಿ, ಚಂದ್ರಸೂರ್ಯ ಮಂಡಲವಹ್ನಿ ಗಂಗಾಸ್ಥಡಿಲ ಕಲಶ ಮಸ್ತಕ ಸಾಲಾಗ್ರಾಮಾದಿ ಪೂಜಾಸ್ಥಾನಂಗಳೊಳಗೆ ಲಿಂಗಾಧಿಷ್ಠಾನವೆ ಮಹಾವಿಶೇಷವೆಂದು ಶಿಲಾಮಯ ಲಿಂಗವನೆ ಬ್ರಹ್ಮನು, ಇಂದ್ರನೀಲಮಯ ಲಿಂಗವನೆ ವಿಷ್ಣು, ರತ್ನಮಯ ಲಿಂಗವನೆ ಇಂದ್ರನು, ಸುವರ್ಣಮಯ ಲಿಂಗವನೆ ಕುಭೇರನು, ರಜತಮಯ ಲಿಂಗವನೆ ವಿಶ್ವದೇವರ್ಕಳು, ಪಿತ್ತಳಮಯ ಲಿಂಗವನೆ ವಾಯು, ಕಾಂಸ್ಯಮಯ ಲಿಂಗವನೆ ವಸುಗಳು, ಮೃಣ್ಮಯ ಲಿಂಗವನೆ ಅಶ್ವಿನಿದೇವರ್ಕಳು, ಸ್ಪಟಿಕಮಯ ಲಿಂಗವನೆ ವರುಣನು, ಅನ್ನಮಯ ಲಿಂಗವನೆ ಅಗ್ನಿ, ತಾಮ್ರಮಯ ಲಿಂಗವನೆ ಸೂರ್ಯನು, ಮುಕ್ತಾ ಫಳಮಯ ಲಿಂಗವನೆ ಚಂದ್ರನು, ಮಣಿಮಯ ಲಿಂಗ ಬಹುವರ್ಣದ ಲಿಂಗವನೆ ನಕ್ಷತ್ರಗಳು, ಮಣಿಮಯ ಲಿಂಗವನೆ ಬುಧನು, ಕಾರ್ಬೊನ್ನ ಲಿಂಗವನೆ ಶುಕ್ರನು, ವಿದ್ರುಮದ ಲಿಂಗವನೆ ಮಂಗಳನು, ಮಾಣಿಕ್ಯದ ಲಿಂಗವನೆ ಬೃಹಸ್ಪತಿ, ತಾಮ್ರಲಿಂಗವನೆ ಶನಿ, ಕುಶಮಯ ಲಿಂಗವನೆ ಸಪ್ತಋಷಿಗಳು, ನೀಲದ ಲಿಂಗವನೆ ಧ್ರುವನು, ಸ್ಥಾಣುನಾಮ ಲಿಂಗವನೆ ಮಾರ್ಕಂಡೇಯನು, ದರ್ಭಾಮಯ ಲಿಂಗವನೆ ಪಿಶಾಚರು, ತ್ರಿಲೋಹಮಯ ಲಿಂಗವನೆ ಗುಹ್ಯಕರು, ವಜ್ರಮಯ ಲಿಂಗವನೆ ಮಾತೃಕೆಗಳು, ಪ್ರಸೂನಮಾಯ ಲಿಂಗವನೆ ಮನ್ಮಥನು, ನಾನಾಕಾರದ ಲಿಂಗವನೆ ಲಕ್ಷ್ಮಿ ಸರಸ್ವತಿಶಚಿ ಮಾತೃಕಾದಿ ಮಹಾಶಕ್ತಿ ದೇವತೆಗಳಿಂತು ಬೇರೆ ಬೇರೆ ಲಿಂಗವನೆ ಪೂಜಿಸಿ, ತಮ್ಮ ತಮ್ಮ ಪದಂಗಳಲ್ಲಿ ಸುಖಮಿರ್ಪರೆಂ[ದೊ]ಡೆ ಕೀಟಕ ಮನುಷ್ಯರೊಳವರಿವರೆನ್ನದೆಲ್ಲರೂ ಸ್ವಯಂಭೂಲಿಂಗ ಬಾಣಲಿಂಗ ಚರಲಿಂಗ ಸಂಕೀರ್ಣಲಿಂಗ ಪ್ರಾಣಲಿಂಗವೇಂಬ ಪಂಚವಿಧಲಿಂಗಂಗಳಂ ತಮ್ಮ ತಮ್ಮ ಶಕ್ತ್ಯಾನುಸಾರ ಮಾದರ್ಚನಾತತ್ಪರರಾಗಲೆವೇಳ್ಕುಮೆಂಬುದನಂಗೀಕರಿಸಿ ಲಿಂಗಾರ್ಚನೆಯ ಮಾಳ್ಪುದಯ್ಯ ಶಾಂತವೀರೇಶ್ವರಾ.