Index   ವಚನ - 81    Search  
 
ಬಳಿಕ ನಿಷ್ಕಾಮನಾದ ಮೋಕ್ಷಧಿಕಾರಿಗಭ್ಯಂತರದಲ್ಲಿ ಮುಖ್ಯವಾಗಿ ಜ್ಞಾನಮಯನಾದ ಪೂಜೆ ಕರ್ತವ್ಯಮಾ ಪೂಜೋಪಚಾರಂಗಳಲ್ಲಿ ಉಪಚಾರಮಂ ಉಪಚಾರ್ಯಮಾದ ದೇವತೆಯ ಗುಣಂಗಳನಾರೋಪಿಸಿ ಮಾಡಲು ತಕ್ಕುದದೆಂತೆಂದದೊಡೆ: ಮೊದಲು ತದನಂತರದಲ್ಲಿ ಶಿವಧರ್ಮವೆ ಕಂದ, ಸುಜ್ಞಾನವೆ ನಾಳ, ಅಷ್ಟಮಹದೈಶ್ವರ್ಯವೆ ದಳ, ರುದ್ರೇಶ್ವರಾದಿಕವೆ ಕೇಸರ, ವೈರಾಗ್ಯವೆ ಕರ್ಣಿಕೆಗಳಾಗಿ ಚಂದ್ರಪ್ರಭಾಯವೆನಿಸಿ ಮೆರೆವ ಹೃದಯಕಮಲದ ಸೋಮಸೂರ್ಯಗ್ನಿ ಮಂಡಲತ್ರಯದ ಮಧ್ಯದಲ್ಲಿ ಸತ್ತೆಂಬ ದಿವ್ಯಮೂರ್ತಿಯಿಂ ಚಿತ್ತೆಂಬ ಕಾಯ ಕಾಂತಿಯಿಂ, ಅನಂದವೆಂಬ ಲಾವಣ್ಯದಿಂ, ತತ್ವ ಪರಿಕಲ್ಪಿತಮಾದಾಭರಣಾಯುಧಾದಿಗಳಿಂದಲಂಕೃತಮಾಗಿ ಸ್ಪಟಿಕದೊಳಗಣ ದೀಪದಂತೆ ಒಳಹೊರಗೆ ಬೆಳಗಿತ್ತಿರ್ದೀಶ್ವರನಂ ಪರಿಭಾವಿಸಿ, ಬಳಿಕ ಸರ್ವಾಧಾರನೀಶ್ವರನೆಂಬ ಬುದ್ಧಿಯೆ ಆಸನ, ಪರಮಾತ್ಮನು ಪರಿಪೂರ್ಣನೆಂಬ ಮತಿ[ಯ] ಆವಾಹನ, ಜಗಕೆಲ್ಲಂ ಶಿವನ ಶ್ರೀಪಾದವೆಂಬ ತಿಳಿವೆ ಪಾದ್ಯ, ಸುಖಾಂಬುಧಿ ಶಂಭುವೆಂಬನುಸಂಧಾನವೆ ಅರ್ಘ್ಯ, ಪರಮಪವಿತ್ರ ಸ್ವರೂಪನಭವನೆಂಬರಿವೆ ಆಚಮನೀಯ, ನಿತ್ಯನಿರ್ಮಳ ನೀಶ್ವರನೆಂಬುಪಲಬ್ದಿಯೆ ಸ್ನಾನ, ಜಗವೆಲ್ಲವನತಿಕ್ರಮಿಸಿರ್ಪ ಶುದ್ಧವಿದ್ಯೆಯ ವಸ್ತ್ರ, ತ್ರಿಗುಣಾಗಮಾತೀತಮಾದ ಜ್ಞಾನವೆ ಯಜ್ಞಸೂತ್ರ, ಚೈತನ್ಯವೆ ಜಗದಲಂಕಾರಮೆಂಬ ಪ್ರತಿಭೆಯ ಆಭರಣ, ಶುದ್ಧಚಿಚ್ಛಕ್ತಿಯೆ ಅನುಲೇಪನ, ಕಾರುಣ್ಯವೆ ಅಕ್ಷತೆ, ಪ್ರಣವಾತ್ಮಕ ಸತ್ಯವಚನವೆ ಪುಷ್ಪ, ವಿಷಯವಾಸನಾವಿಲಯವೆ ಧೂಪ, ಜಗೆದ್ವರ್ತಿವಿಡಿದುಜ್ವಲಿಪ ಪರಂಜ್ಯೋತಿಯೆ ದೀಪ, ಜಗವೆಲ್ಲಮಂ ಕಬಳೀಕರಿಸಿಕೊಂಡಿಪ್ಪಾತನೆ ನಿತ್ಯತೃಪ್ತನೆಂಬ ಸಂವಿತ್ತೇ ನೈವೇದ್ಯ, ತ್ರಿಗುಣಂಗಳನೊಳಕೊಂಡು ನಿಂದ ಜ್ಞಪ್ತಿಯೆ ತಾಂಬೂಲ, ಸೋಹಂ ಭಾವದಾವೃತ್ತಿಯೆ ಪ್ರದಕ್ಷಿಣ, ಸಮಸ್ತ ತತ್ತ್ವಂಗಳನತಿಕ್ರಮಿಸಿನಿಂದ ನಿಜವೆ ನಮಸ್ಕಾರ, ಶಿವೈಕ್ಯಸ್ಥಿತಿಯೆ ವಿಸರ್ಜನವೆಂಬ ಉಪಚಾರಂಗಳಿಂದಂತಃ ಪೂಜೆಯಂ ರಚಿಸೆಂದೊರೆದಿರಯ್ಯ ಶಾಂತವೀರೇಶ್ವರಾ.