Index   ವಚನ - 83    Search  
 
ಮತ್ತಮಾ ಪರಮೇಶ್ವರ ನಿರ್ಮಿತಮಾದ ಜಗತ್ತಿನಲ್ಲಿ ಚರಮಶರೀರ ಎನಿಸಿಕೊಂಡು ಸಮಸ್ತ ಶೈವರೊಳತಿ ವಿಶಿಷ್ಟನಾಗಿ, ಇತರ ಶೈವರಂತೆ ಕ್ರಿಯಾಬಹುಲದಿಂದಲ್ಪಫಲಮಂ ಪಡೆಯದೆ ಅಲ್ಪಕ್ರಿಯೆ ಯಿಂದನಂತಫಲಮಂ ಪಡೆವಾತನಾಗಿ, ಶಿವದೀಕ್ಷೆಯಿಂ ಮೇಲೆ ಸ್ನಾನ ಭೋಜನ ನಿದ್ರೆ ಜಾಗರಣ ಮಲಮೂತ್ರ ವಿಸರ್ಜನಾದಿ ಕಾಲಂಗಳಲ್ಲಿ ಅಶುಚಿಭಾವನೆದೋರದೆ ಸದಾ ಲಿಂಗಾಂಗಸಂಬಂಧಿಯಾಗಿ, ಲಿಂಗಭೋಗೋಪಭೋಗಿಯಾಗಿ, ತನ್ನಿಷ್ಟಲಿಂಗದಲ್ಲಿ ಆವಾಹನ ವಿಸರ್ಜನಾದಿ ಕ್ರಿಯೆಗಳಂ ಮಾಡದಾತನಾಗಿ, ತ್ರಿಕಾಲ ಲಿಂಗಾರ್ಚನಾಸಕ್ತನಾಗಿ, ಲಿಂಗಲೋಪ ವ್ರತಲೋಪಂಗಳಲ್ಲಿ ಪ್ರಾಣತ್ಯಾಗವಲ್ಲದೆ ಬೇರೊಂದು ಪ್ರಾಯಶ್ಚಿತ್ತವಿಲ್ಲದಾತನಿಗೆ, ಗುರುನಿಂದೆ ಶಿವನಿಂದೆ ಜಂಗಮನಿಂದೆ, ಪ್ರಸಾದಪಾದೋದಕ ಭಸ್ಮಧಾರಣ ನಿಂದೆ, ಶಿವಾಗಮ ಶಿವಕ್ಷೇತ್ರ ಶಿವಾಚಾರನಿಂದೆಗಳಂ ಸೈರಿಸದಾತನಾಗಿ, ವಿಷ್ಣುವಾದಿ ದೇವತೆಗಳಂ ಲೆಕ್ಕಿಸದಾತನಾಗಿ, ಬಾಹ್ಯದಲ್ಲಿ ಶಿವಲಿಂಗ ಲಾಂಛನವಿಲ್ಲದ ಭವಿಗಳೊಡನೆ ಏಕಾಸನಶಯನ ಯಾನಸಂಪರ್ಕ ಸಹಭೋಜನಾದಿಗಳಿಲ್ಲದಾತನಾಗಿ, ಅನೃತ ಅಸ್ಥಿರವಾಕ್ಯ ವಂಚನೆ ಪಙ್ತೆಭೇದ ಉದಾಸೀನ ನಿರ್ದಯೆಯೆಂಬ ಅರಂತರಂಗ ಭವಿಗಳಿಲ್ಲದಾತನಾಗಿ, ಶಿವಮಾಹೇಶ್ವರಂ ಕಾಣುತಲೇಳೂದು, ಇದಿರಾಗಿ ನಡೆವುದು, ಅವರ್ಗೂಡಿ ತಿರುಗೂದು, ಪ್ರಿಯವಚನಮಂ ನುಡಿವುದು, ಗದ್ದುಗೆಯನಿಕ್ಕೂದು, ಅನ್ನಪಾನಂಗಳಂ ಸಮರ್ಪಿಸೂದೆಂಬ ಮುಕ್ತಿಸೋಪಾನಕ್ರಮ ಸಪ್ತಕ್ರಮಯುಕ್ತವಾಗಿಪ್ಪಾತನೆ ವೀರಶೈವನಯ್ಯ ಶಾಂತವೀರೇಶ್ವರಾ.