Index   ವಚನ - 1    Search  
 
ಜೀವನ್ಮುಕ್ತನಾದ ಶರಣಂಗೆ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಕರ್ಮಂಗಳನರಿವ ತೆರೆನಾವುದುಯೆಂದಡೆ: ಜ್ಞಾನಾಗ್ನಿಯಿಂದ ಸುಡಬಲ್ಲ ಸುಂಕಿನಂತೆ ಉರಿದು ಹೋಗೂದು. ಪ್ರಾರಬ್ಧ ಉಂಡಲ್ಲದೆ ತೀರದು. ಆಗಾಮಿಯಂದಧಿಕಾರಿಯಪ್ಪುದರಿಂದ ಫಲಿಸುತ್ತಿರದು ನೋಡಾ. ಅದೆಂತೆಂದಡೆ: ಜ್ಞಾನಾಗ್ನಿಯಿಂದ ದಗ್ಧವಾದ ಕರ್ಮವೆ ಪ್ರಾರಬ್ಧವನೀವುದರಿಂದ ಮುಂದೆ ದೇಹೋತ್ಪತ್ತಿಯನು ಮಾಡಲುಳ್ಳುದೆಂದಡೆ ಹುರಿದ ಚಣಕಾದಿ ಬೀಜವು ಭೋಗಕ್ಕೆ ಯೋಗ್ಯವಲ್ಲದೆ ಅಂಕುರೋತ್ಪತ್ತಿಗೆ ಕಾರಣವಿಲ್ಲದಂತೆ, ಜ್ಞಾನಿಯ ಕರ್ಮವೆ ಪ್ರಾರಬ್ಧದಿಂದ ಜನ್ಮಾಂತರಕ್ಕೆ ಕಾರಣವಲ್ಲ ನೋಡಾ. ಆ ಶರಣನು ದೃಷ್ಟವೆಂಬ ಪರಿಚಾರಕನಿಂದತ್ತಮಾದ ಶ್ರಕ್ಚಂದನಾದಿ ಭೋಗಸ್ವೀಕಾರವಿರ್ದೊಡಂ ನಿಜಭೃತ್ಯುವಿನೊಳ್ಸುರತಂಗೈವ ಪುಂಜಲಿಯಂತೆ ಪರಾಕದೆಯಪ್ಪುದು ನೋಡಾ. ಆ ಶರಣನು ಮೂಢನಂತೆ ಕಲಾಭಿಘ್ಞತೆಯೊಳ್ಮೌನಗೊಂಡಿರ್ದೊಡಂ ಕಲ್ಪಿತ ದ್ವೈತಪರ ಶ್ರುತಿವಾಕ್ಯವೈಶ್ರುತಿವಿಷಯದೊಳಸಮನಪ್ಪ ನೋಡಾ. ಶರಣ ತಾನು ಪ್ರಸ್ತುವನರಿಯದ ಬಹುಭಾಷಣನಂತೆ ಏನನುಡಿದೊಡೆದೆ ಗೂಢಭಿಪ್ರಾಯ ಗರ್ಭಿತವಾದ ಸತ್ಯದ್ವೈತನಿಷ್ಠೆ ನಿಗಮಾದಿ ಪ್ರಾಯಮಪ್ಪುದು ನೋಡಾ. ಆ ಶರಣನು ಆಚಾರ್ಯನಂತೆ ಶಿಷ್ಯರನುಪದೇಶಿಸುತಿರ್ದೊಡೆಯಾತ್ಮನು ನಿತ್ಯಮುಕ್ತನಪ್ಪುದರಿಂದ ಬೋಧ್ಯ ಬೋಧಕತ್ವವೆ ಮಾಯಾರಚನೆಯೆಂಬ ಕೃತನಿಶ್ಚಯದಿಂ ಗಗನವಾಣಿಯಂತೆ ಗುರುತ್ವಾಭಿಮಾನ ಹಿತನಪ್ಪ ನೋಡಾ. ಆತನು ಉನ್ಮತ್ತನಂತೆ ಅನುಚಿತವಕ್ತ್ರವಾದೊಡಂ ದ್ವೈತಭಾವವಳಿದಾತ್ಮರಾಮನಪ್ಪುದರಿಂದ ಸುರತಾಂತ್ಯಸಮಯದೊಳಕಾಮಶಕ್ತಿಮಿಥುನವಾಕ್ಯದಂತೆ ನಂಬಿ ದೇಹ ವಿಷಯವಪ್ಪುದು ನೋಡಾ. ಆ ಶರಣನು ಪಿಶಾಚಗ್ರಹವಿಷ್ಟನಂತೆ ಗಳಗಳನೆ ನಡೆದೊಡಂ ಪೂರ್ಣೈಕಸ್ವಭಾವನಿಷ್ಠನಪ್ಪುದರಿಂದ ವಿರಯಗಮನದಂತೆ ಪ್ರಾಪ್ಯನುಸಂಧಾನನಪ್ಪ ನೋಡಾ. ಆ ಶರಣನು ಪುತ್ರಯೋಗನುಭವವನುಳ್ಳ ಗ್ರಾಮ್ಯಜನಕನಂತೆ ಶೋಕಂಗೈಯಲದೆ ಸರ್ವೇಂದ್ರಿಯಂಗಳು ಬ್ರಹ್ಮಾಂಶಗಳೆಂದು ಆಳೋಚನಂಗೈಯಲದೆ ಕಲ್ಪಿತ ಸಾಧಕಾವಸ್ಥೆಯೊಳ್ದಂಡಿತ ಸರ್ವೆಂದ್ರಿಯಧರ್ಮವಿಷಯವಾದ ಕರುಣರಸವಪ್ಪುದು ನೋಡಾ. ಆ ಶರಣನು ವಿಕೃತಬಹುರೂಪವಾದರುಶನ ವಿನೋದದೊಳಟ್ಟಹಾಸಂಗೈದೊಡಂ ವಿಚಿತ್ರ ಪುಣ್ಯಪಾಪಾದಿ ವ್ಯವಹಾರಮಂ ಸತ್ಯವೆಂದು ಪ್ರತಿಪಾದಿಪ ಮೀಮಾಂಸಾದಿ ದರ್ಶನ ವಿಷಯವಾದ ಪರಿಹಾಸಮಪ್ಪುದು ನೋಡಾ. ಶರಣ ತಾನು ವಿಟನಂತೆ ಸ್ತ್ರೀಲೋಲನಾಗಿರ್ದೊಡಂ ಪೂರ್ಣೈಕಸ್ವಭಾವನಪ್ಪುದರಿಂದ ನಿಜಾನಂದಾನುಭಾವಿಯಪ್ಪ ನೋಡಾ. ಆ ಶರಣನು ಶತ್ರುವಿನಂತೆ ಆವಾತನಂ ಕ್ರೋಧದಿಂ ಸಂತಾಪಬಡಿಸಿದಡಂ ಕ್ಞೇತ್ರದಾಹಾಗ್ನಿಯಂತೆ ವಿಶಿಷ್ಟಫಲಸಂಪತ್ತಿಗಾತನ ಆಶ್ರಯಂ ಮಾಡುವಾತನೆಂದು ವಿಶ್ವಾಸಂಗೈವುದು ನೋಡಾ. ಅಂತಪ್ಪ ಶರಣ ಆವ ಕಾಲದಲ್ಲಿಯು ಶರೀರಂಬಡೆಯದೆ ಸಚ್ಚಿದಾನಂದ ಬ್ರಹ್ಮವಪ್ಪುದರಿಂದ ಆ ಶರಣನ ದೇಹವೆ ಕೈಲಾಸವಪ್ಪುದು ತಪ್ಪದು ಕಾಣಾ ಶೂನ್ಯನಾಥಯ್ಯ.