Index   ವಚನ - 8    Search  
 
ಪ್ರಳಯಕಲ ವಿಜ್ಞಾನಕಲರೆಂಬವರಿಗೆ ಪ್ರಪಂಚು ನಿಃಪ್ರಪಂಚು ಹುಟ್ಟುವ ಸ್ಥಾನಂಗಳಾವವೆಂದಡೆ: ಆಧಾರಚಕ್ರದಲ್ಲಿ ವರ್ಣಾಶ್ರಮಧರ್ಮಾದಿ ಕ್ರೀಗಳು ಪುಟ್ಟಿದವು. ಸ್ವಾಧೀಷ್ಠಾನದಲ್ಲಿ ಮಾಯಾವ್ಯಸನ ಮೋಹಾದಿ ಗುಣಂಗಳು ಪುಟ್ಟಿದವು. ನಾಭಿಸ್ಥಾನದಲ್ಲಿ ತಮೋ ಮೋಹಾದಿ ಗುಣಂಗಳು ಪುಟ್ಟಿದವು. ಉದರಸ್ಥಾನದಲ್ಲಿ ಹಸಿವು ನೀರಡಿಕೆ ಮೊದಲಾದ ಗುಣಂಗಳು ಪುಟ್ಟಿದವು. ಇಂತೀ ನಾಲ್ಕು ಚಕ್ರ ಗುಣಸಂಪನ್ನನೆ ಪ್ರಳಯಕಲನೆಂಬ ಜೀವರು ನೋಡಾ. ಇನ್ನು ಹೃದಯಸ್ಥಾನದಲ್ಲಿ ಸದ್ಭಕ್ತಿ ಶಾಂತ್ಯಾದಿ ಸುಗುಣಂಗಳು ಪುಟ್ಟಿದವು. ಕಂಠಸ್ಥಾನದಲ್ಲಿ ಕರುಣರಸಾಬ್ಧಿ ಶಕ್ತಿ ವಿರಕ್ತಿ ಮೊದಲಾದ ಗುಣಂಗಳು ಪುಟ್ಟಿದವು. ಭ್ರೋಮಧ್ಯಸ್ಥಾನದಲ್ಲಿ ಜ್ಞಾನ ಬುದ್ಧಿ ಸಮರ್ಥಿಕೆ ಮೊದಲಾದ ಗುಣಂಗಳು ಪುಟ್ಟಿದವು. ಶೂನ್ಯಸ್ಥಾನದಲ್ಲಿ ನಿಶ್ಚಿಂತತ್ವ ಸದಾನಂದ ಗುಣಂಗಳು ಪುಟ್ಟಿದವು. ಇಂತೀ ನಾಲ್ಕು ಚಕ್ರಗುಣಸಮೇತರು ವಿಜ್ಞಾನಕಲರೆಂಬ ಜೀವರು ನೋಡಾ. ಅದುಕಾರಣ ಹೃದಯಕಮಲಮಧ್ಯದ ವಿಜ್ಞಾನಕಲನೆ ಸೌಖ್ಯಾದಿ ಗುಣಸಮೇತನಾಗಿ ನಿಜಮೋಕ್ಷಗಾಮಿಯಾಗಿಹನು ನೋಡಾ. ಆತನ ಮೇಲೆ ಅನುಗ್ರಹ ಶಕ್ತಿಪಾತವಾಗುತ್ತಿರಲಾಗಿ ಮೋಹ ಮದ ರಾಗ ವಿಷಯ ತಾಪ ಶೋಕ ವೈಚಿತ್ರವೆಂಬ ಸಪ್ತಮಲವ ತೊಲಗಿನೂಕುವ ನಿವೃತ್ತಿಶಕ್ತಿ ಪ್ರವರ್ತಿಸುತ್ತಿಹುದು ನೋಡಾ. ಅದರಿಂದ ವಿಜ್ಞಾನಕಲನೆಂಬ ಮಹಾತ್ಮಂಗೆ ಸಂಸಾರ ದುಃಖವೆಂಬ ಸಮುದ್ರದಿಂದ ಶೀಘ್ರವೈರಾಗ್ಯ ಪುಟ್ಟುತ್ತಿಹುದು ನೋಡಾ ಶೂನ್ಯನಾಥಯ್ಯ.