Index   ವಚನ - 128    Search  
 
ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ, ಹಿಡಿವಾತನ ಯುಕ್ತಿ ಎಂತೆಂದಡೆ: ಮನ, ವಚನ, ಕಾಯ, ತ್ರಿಕರಣಶುದ್ಧಾತ್ಮನಾಗಿ, ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ, ನಡೆವುದ ನಡೆಯದಿಹುದೆಂಬುದ ಸ್ಥಿರಕರಿಸಿ, ಶ್ರುತ, ದೃಷ್ಟ, ಅನುಮಾನ, ಮೂರನೊಂದುಮಾಡಿ ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು. ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ: ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವ ಭೇದ. ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ ರಾಗ ವಿರಾಗಗಳೆಂಬ ಭಾವವ ವಿಚಾರಿಸಿ, ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ. ತೊಡಕಿನಂಬಿನ ಘಾಯ ತಪ್ಪಿದಡೆ ಇಹ-ಪರದಲ್ಲಿ ಉಭಯ ದೋಷ ಹೀಗೆಂದು ಉಪದೇಶವಂ ಕೊಟ್ಟು ಸಂತೈಸುವುದು ಗುರುಸ್ಥಲ. ಆ ಗುಣಕ್ಕೆ ಮುಯ್ಯಾಂತು, ಪರಮ ಹರುಷಿತನಾಗಿ, ಗಣ ಸಮೂಹಂ ಕೂಡಿ, ಪರಮ ವಿರಕ್ತರಂ ಕರೆದು, ಮಹತ್ತು ನೆರಹಿ, ಗುರು ಲಿಂಗ ಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ. ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ, ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ. ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು. ಇಂತೀ ಸರ್ವಗುಣಸಂಪನ್ನ ಮಾಡಿಸಿ ಕೊಂಬವನೂ ತಾನೆ, ಮಾಡುವಾತನೂ ತಾನೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.