Index   ವಚನ - 145    Search  
 
ಸರ್ವಮಯ ಲಿಂಗಾಂಕಿತ ಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲ ತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮ ತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.