Index   ವಚನ - 146    Search  
 
ಸರ್ವಶೀಲದ ವ್ರತದಾಯತವೆಂತುಟೆಂದಡೆ: ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು. ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು. ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು. ಅದೆಂತೆಂದಡೆ: ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ. ಆ ಜಂಗಮಕ್ಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ. ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು. ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ? ಇಂತೀ ಉಭಯದ ವ್ರತವೊಡಗೂಡಿದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು.