ಸೀಮೋಲ್ಲಂಘನವೆಂಬುದ ನಾನರಿಯೆ, ನೀವೆ ಬಲ್ಲಿರಿ.
ಇದ್ದ ಮನೆಯ ಬಿಡಲಾರದೆ,
ತೊಟ್ಟಿದ್ದ ತೊಡಿಗೆಯ ಅಳಿಯಲಾರದೆ,
ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೆ?
ಅದು ತನ್ನ ಸೀಮೆಯೊ ಜಗದ ಸೀಮೆಯೊ
ಎಂಬುದ ತಾನರಿಯಬೇಕು.
ತನ್ನ ಸೀಮೆಯಲ್ಲಿ ಬಂದಂಗವ
ಜಗದ ಸೀಮೆಯಲ್ಲಿ ಅಳಿಯಬಹುದೆ?
ತನ್ನಂಗಕ್ಕೆ ಕಂಟಕ ನೇಮ ತಪ್ಪಿ ಬಂದಲ್ಲಿ
ಅಂಗವ ಲಿಂಗದಲ್ಲಿ ಬೈಚಿಟ್ಟು
ಕೂಡಿದ ಅಂಗ ಸೀಮೋಲ್ಲಂಘನ. ಇಂತೀ ನೇಮ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಂದಿತ್ತು.