ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ.
ಒಡಗೂಡೆನೆಂದು ಮತ್ತೊಡಗೂಡಿದಡೆ ಅದು ಪರಪಾಕ.
ಮತ್ತಾವುದೊಂದು ಲಿಂಗಕ್ಕೆ ಸಲ್ಲದೆಂಬುದನರಿತು
ಮತ್ತೆಲ್ಲರ ಮಾತು ಕೇಳಿ ಮೆಲ್ಲನೆ ಆದಲ್ಲಿ ಆ ಗುಣ ಸಲ್ಲದು.
ಇವನೆಲ್ಲವನರಿತು ಮತ್ತೆ ಸಲ್ಲದುದ ಸಲ್ಲಿಸಿದೆನಾದಡೆ
ಎಲ್ಲಾ ಯೋನಿಗೆ ಕಡೆಯಪ್ಪ ಶ್ವಾನನ ಯೋನಿಯಲ್ಲಿ ಬಪ್ಪೆ.
ಈ ಗುಣ ತಪ್ಪದು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಾಕ್ಷಿಯಾಗಿ.