ಅರ್ಥಪ್ರಾಣಾಭಿಮಾನ ನಿಮ್ಮದೆಂಬಿರಿ:
ಒತ್ತಿ ನೋಡಿದರೆ ಮುಟ್ಟಲೀಯಿರಿ:
ಮುಟ್ಟೆ ಬಂದಲ್ಲಿ ಕಠಾರಿಯ ಕಾಳಗವ ನಿವಾಡಿಸುವಿರಲ್ಲದೆ,
ಲಿಂಗ-ಜಂಗಮವಂತನಾಗಬಾರದು!
ಕೂಡಲಸಂಗಮದೇವಾ,
ವೇಷಡಂಭಕರಿಗೆ ಭಕ್ತಿ ಎಂತಪ್ಪುದಯ್ಯಾ?
Hindi Translationकहते हो, अर्थप्राणाभिमान तुम्हारे हैं ।
परीक्षा के लिए स्पर्श करने नहीं देते ।
स्पर्श करने पर खङ्ग युद्द करते हो,
लिंगवंत जंगमवंत बनना कठिन है
कूडलसंगमदेव, वेषधारी दंभियों से भक्ति कैसे होगी?
Translated by: Banakara K Gowdappa
English Translation You say, "Life, honour, wealth are Thine":
But you shrink from an actual test;
When one draws near to test you,
You choose to fight with swords.
You cannot be a follower
Of Liṅga and Jaṅgama !...
O Kūḍala Saṅgama Lord,
How is it possible to have
Devotion in such hypocrites
Who are worth their garb alone?
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಬಸವಣ್ಣನವರ ಮಹಿಮೆಯಿಂದಾಗಿ ಅವರು ಬೋಧಿಸಿದ ಶೈವಧರ್ಮಕ್ಕೆ ಬಂದು ಸೇರುವ ಜನರ ಸಂಖ್ಯೆಯಲ್ಲೇನೂ ಕಡಿಮೆಯಿರಲಿಲ್ಲ. ಅವರಲ್ಲಿ ಕೆಲವರು ಶಿವಭಕ್ತರಂತೆ ನಟಿಸುತ್ತಿದ್ದುದೂ ಉಂಟು, ಅಂಥವರಿಗೆ ಬಸವಣ್ಣನವರು ಈ ಮುಂದಿನಂತೆ ಹೇಳಿರುವರು :
“ನಿಮ್ಮ ಅರ್ಥ-ಪ್ರಾಣ-ಅಭಿಮಾನ ಎಲ್ಲವೂ ನಮ್ಮದೆಂದು ಹೇಳುವಿರಿ. ಅರ್ಥವೆಂದರೆ ಭಕ್ತರಿಗೆ ಒದಗುವ ಸಹಾಯಾರ್ಥಧನವೋ, ಪ್ರಾಣವೆಂದರೆ ಶರಣರ ಸೇವೆಗೆ ಬಳಕೆಯಾಗುವ ಶಕ್ತಿಸಾಮರ್ಥ್ಯವೋ, ಅಭಿಮಾನವೆಂದರೆ ಶಿವಧರ್ಮಪಂಥದ ಪ್ರಗತಿಗೆ ಮೀಸಲಾದ ಮಮತೆಯೋ ಮುಟ್ಟಿ ನೋಡೋಣವೆಂದರೆ ಕೈಗೇ ಸಿಗದಂತಿರುವಿರಿ. ಒತ್ತಾಯಿಸಿದರೆ ಆ ನಿಮ್ಮ ಅರ್ಥಪ್ರಾಣಾಭಿಮಾನಗಳನ್ನು ನಿಮ್ಮಲ್ಲಿಯೇ ಬಿಗಿಹಿಡಿದುಕೊಂಡು ಕೊಸರಾಡುವಿರಿ. ನಿಮಗೆ-ಲಿಂಗಸ್ವರೂಪಿಯಾದ ಜಂಗಮದಾಸೋಹವಿಲ್ಲವಾಗಿ -ಭಕ್ತಿಯೆಂಬುದು ಅಳವಟ್ಟೀತು ಹೇಗೆ ?” ಎಂದು –ಧರ್ಮದೊಡನೆ ಕಳ್ಳಾಟವಾಡುತ್ತ ಧರ್ಮಿಷ್ಠರಂತೆಯೇ ನಟಿಸುತ್ತಿದ್ದ ದೊಡ್ಡ ಕುಳಗಳನ್ನು ತರಾಟೆಗೆ ತೆಗೆದುಕೊಂಡಿರುವರು ಬಸವಣ್ಣನವರು.
ಡಾಂಭಿಕತೆಯ ಗೂಢವನ್ನು ಬಯಲು ಮಾಡುವ ಬಸವಣ್ಣನವರ ಈ ವಿಧವಾದ ನಿರ್ದಾಕ್ಷಿಣ್ಯದ ಮಾತಿನ ಅವಶ್ಯಕತೆ ಇಂದಿಗೆ-ಎಂದಿಗಿಂತಲೂ ಅಧಿಕವಾಗಿಯೇ ಇದೆ.
ವಿ : ಕಠಾರಿಯ ಕಾಳಗ : ಶತ್ರು ತೀರ ಹತ್ತಿರವಾಗಿ ನುಗ್ಗಿ ಬಂದಾಗ ಹೋರಾಡಲು ಬಳಸುವ ಚೂರಿಯಂಥ ಚಿಕ್ಕ ಆಯುಧ. ನಿವಾಡಿಸು : ಓಡಿಸು, ನಿವಾರಿಸು, ಪ್ರಯೋಗಿಸು ? ನೋಡಿ ವಚನ 286, 932.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.