Index   ವಚನ - 51    Search  
 
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರ ಮಕ್ಕಳೆಂಬೆ. ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ. ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ ಅಘೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. ವಚನದ ರಚನೆಯ ಅರಿದೆನೆಂಬ ಅಹಂಕಾರವ ಮುಂದುಗೊಂಡು ತಿರುಗುವ ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ. ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ: ವಾಯು ಬೀಸದ ಉದಕದಂತಿರಬೇಕು ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು; ದರಿದ್ರಗೆ ನಿಧಾನ ಸೇರಿದಂತಿರಬೇಕು; ರೂಹಿಲ್ಲದ ಮರುತನಂತಿರಬೇಕು; ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು. ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.