ಬಸವಣ್ಣ   
Index   ವಚನ - 889    Search  
 
ಯಸ್ಯ ಕ್ರಿಯಾ ತಸ್ಯ ಭವತಿ ಎಂದು ಕಟ್ಟಾಚಾರದಲ್ಲಿದ್ದು ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ. ಉತ್ಪತ್ತಿ-ಸ್ಥಿತಿ-ಭೋಗ-ಭಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ. ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು: ಪರತತ್ತ್ವವನರಿದೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ. ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ: ಇಂತೀ ತ್ರಿವಿಧದಲ್ಲಿ ವಂಚಕನಾದರೆ ಈಸು ವಿಧದೊಳಗೆ ಅಂಗವಿಲ್ಲ, ಮೇಲೆ ಸತ್ಪುರುಷರ ಸಂಗವಿಲ್ಲ, ಯುಕ್ತಿ ಇಲ್ಲಾ, ಎನಗೆ ಭಕ್ತಿಯೆಂತಹುದಯ್ಯಾ? ಬಲ್ಲವರ ಬೆಸಗೊಂಡರೆ ಎನ್ನ ಬಿಮ್ಮು ಕೆಟ್ಟಿಹುದೆಂದು ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ! ಕೂಡಲಸಂಗಮದೇವಾ, ಎನ್ನವಗುಣವ ನೋಡದೆ ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ ಎನಗೆ ಕೃಪೆ ಮಾಡಯ್ಯಾ.