Index   ವಚನ - 54    Search  
 
ಗುರುವೆಂಬೆನೆ, ಗುರುವು ನರನು; ಲಿಂಗವೆಂಬೆನೆ, ಲಿಂಗವು ಕಲ್ಲು; ಜಂಗಮವೆಂಬೆನೆ, ಜಂಗಮವು ಆತ್ಮನು; ಪಾದೋದಕವೆಂಬೆನೆ, ಪಾದೋದಕ ನೀರು; ಪ್ರಸಾದವೆಂಬೆನೆ, ಪ್ರಸಾದ ಓಗರ. ಇಂತೆಂದುದಾಗಿ, ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ, ಗುರುವೆಂಬವನು ನರನು. ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಒಳಗಾದ ಕಾರಣ, ಲಿಂಗವೆಂಬುದು ಕಲ್ಲು. ಆಶೆಪಾಶೆಗೆ ಒಳಗಾದ ಕಾರಣ, ಜಂಗಮವೆಂಬುದು ಆತ್ಮನು. ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ ಪಾದೋದಕ ಪ್ರಸಾದವೆಂದು ಕೊಂಡೆನಾದಡೆ ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು ಕಾಣಾ ಅಮುಗೇಶ್ವರಾ.