Index   ವಚನ - 54    Search  
 
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಅಣ್ಣಗಳಿರಾ, ನೀವು ಕೇಳಿರೊ. ಅವರ ಬಾಳುವೆ ಎಂತೆಂದಡೆ ಕುರುಡ ಕನ್ನಡಿಯ ಹಿಡಿದಂತೆ. ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಚದುರರೆಲ್ಲರೂ ಹಿರಿಯರೆ? ಅಲ್ಲಲ್ಲ. ಇದ ಮೆಚ್ಚುವರೆ ನಮ್ಮ ಶರಣರು? ಅವರ ನಡೆ ಎಂತೆಂದಡೆ ಒಳಗನರಿದು, ಹೊರಗ ಮರೆದು, ತನುವಿನೊಳಗಣ ಅನುವ ಹಸುಗೆಯ ಮಾಡಿದರು. ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು. ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು, ಓಂಕಾರವನೆತ್ತಿದರು; ಅದರೊಡಗೂಡಿದರು. ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವ ಕಲಿತುಕೊಂಡು ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.