Index   ವಚನ - 49    Search  
 
ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ? ನಿನ್ನಲ್ಲಿಯೊ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು?