ಸಕಲದಲ್ಲಿ ಅಳಿದು ನಿಃಕಲದಲ್ಲಿ ಉಳಿದ ಮತ್ತೆ,
ಸಕಲವ ಕೂಡಿಹೆನೆಂಬ ನಿಃಕಲವುಂಟೆ ಅಯ್ಯಾ?
ನಿಃಕಲದೊಳಗೆ ಸಕಲವಡಗಿ,
ಆ ಗುಣ ಉಪದೃಷ್ಟಕ್ಕೆ ಈಡಿಲ್ಲದಲ್ಲಿ,
ಅಖಿಲಜಗವೆಂಬುದು ಹೊರಗು.
ಆ ಗುಣ ನಿನ್ನ ಸದ್ಭಾವಬೀಜವಾದಲ್ಲಿ ನಿನ್ನಂಗವೆ ಕೈಲಾಸ.
ಆ ಲಿಂಗದ ಕೂಟವೆ ನಿರ್ಯಾಣ.
ಇದು ನಿಸ್ಸಂಗದ ಸಂಗ; ನಿಮ್ಮ ನೀವೇ ತಿಳಿದುಕೊಳ್ಳಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.