ಸುಗಂಧದ ಮೂಲದ ಬೇರಿನ ಗಂಧ,
ಎಲೆ ಬಳ್ಳಿಯನೇತಕ್ಕೆ ವೇಧಿಸದು?
ಕುಸುಮದ ಸುವಾಸನೆ
ತನ್ನಯ ತೊಟ್ಟು ಎಲೆ ಕೊನರು ಬೇರುವನೇಕೆ ವೇಧಿಸದು?
ಇದು ಇಷ್ಟ ಪ್ರಾಣಯೋಗದ ಭೇದ.
ಗಿಡುಗಿಡುವಿಗೆ ಕುರುಹಲ್ಲದೆ
ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ,
ಕದಂಬಗಂಧವಲ್ಲದೆ
ಒಂದರ ಗಂಧವೆಂದು ಸಂಧಿಸಿ ತೆಗೆಯಲಿಲ್ಲ.
ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪರು.
ಇದು ದೃಷ್ಟಾನುಭಾವಸಿದ್ಧಿ, ಸರ್ವಸ್ಥಲಭೇದ,
ವಿಶ್ವತೋಮುಖರೂಪು.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು
ತತ್ವಭಿತ್ತಿಸ್ವರೂಪನು.